ಬಿಜೆಪಿ ಜತೆ ಮೈತ್ರಿ: ಮೈಸೂರಿನಲ್ಲಿ ಜೆಡಿಎಸ್ ನಾಯಕರ ಸಾಮೂಹಿಕ ರಾಜೀನಾಮೆ

Prasthutha|

ಮೈಸೂರು: ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಜೆಡಿಎಸ್​​ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಮುಸ್ಲಿಂ ಸೇರಿದಂತೆ ಇತರೆ ನಾಯಕರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದು, ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರೆ.

- Advertisement -


ಈ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ನಿನ್ನೆ(ಸೆ.27) ಸುದ್ದಿಗೋಷ್ಠಿ ನಡೆಸಿ ಬಿಜೆಪಿಯೊಂದಿಗಿನ ಮೈತ್ರಿಯಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಧಕ್ಕೆ ಆಗಲು ಬಿಡುವುದಿಲ್ಲ ಎಂದು ಪಕ್ಷದ ಮುಸ್ಲಿಂ ನಾಯಕರಿಗೆ ಸಂದೇಶ ನೀಡಿದ್ದಾರೆ. ಇದರ ಬೆನ್ನಲ್ಲೇ ಮೈಸೂರಿನಲ್ಲಿ ಮುಸ್ಲಿಂ ನಾಯಕರು ಜೆಡಿಎಸ್​ಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಮೈಸೂರು ನಗರದ ಎನ್​ಆರ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಶಾಹಿದ್ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಸಾಮೂಹಿಕವಾಗಿ ಜೆಡಿಎಸ್​ಗೆ ಗುಡ್​ಬೈ ಹೇಳಿದ್ದು, ರಾಜೀನಾಮೆ ಪತ್ರವನ್ನು ಅಂಚೆ ಮೂಲಕ ರಾಜ್ಯಾಧ್ಯಕ್ಷರಿಗೆ ರವಾನಿಸಿದ್ದಾರೆ.

- Advertisement -

ಜಾತ್ಯಾತಿತ ಪಕ್ಷ ಎಂದು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದೆವು. ಆದರೆ ಕೋಮುವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವುದು ಸರಿಯಲ್ಲ. ಹಿಂದೆ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಕೋಮು ಸೌಹಾರ್ದತೆ ಹಾಳು ಮಾಡುವ ಕೆಲಸಗಳಾಗಿವೆ. ಕುಮಾರಸ್ವಾಮಿ ಹಾಗೂ ನಿಖಿಲ್‌ರವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಅವರನ್ನು ಪಕ್ಷದಿಂದ ಉಚ್ಟಾಟನೆ ಮಾಡಿ ಎಂದು ಸಿಎಂ ಇಬ್ರಾಹಿಂ ಅವರಿಗೆ ಮನವಿ ಮಾಡಿದ್ದೆವು. ಅದರೆ ಅವರು ನಮಗೆ ಸ್ಪಂದಿಸಿಲ್ಲ. ಆದ್ದರಿಂದ ಸಾಮೂಹಿಕ ರಾಜೀನಾಮೆ ನೀಡಿದ್ದೇವೆ ಎಂದು ಮುಖಂಡರು ತಿಳಿಸಿದ್ದಾರೆ.

Join Whatsapp