ಬೆಂಗಳೂರು: ನವ ವಿವಾಹಿತೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಅಂಚಾರ್ಲಹಳ್ಳಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಅಂಚಾರ್ಲಹಳ್ಳಿಯ ನವ ವಿವಾಹಿತೆ ತನುಶ್ರೀ (22) ಮೃತಪಟ್ಟವರು. ಪತಿಯ ಮನೆಯವರೇ ಕೊಲೆ ಮಾಡಿದ್ದಾರೆಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ.
ತನುಶ್ರೀ ಸಾವಿನ ಸುದ್ದಿಯನ್ನು ತವರು ಮನೆಗೆ ತಿಳಿಸದೇ ಗಂಡನ ಮನೆಯವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮೃತ ತನುಶ್ರೀ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಜಂಗಮಸೀಗೆಹಳ್ಳಿಯ ನಿವಾಸಿ. ಕಳೆದ ವರ್ಷದ ಮೇ ತಿಂಗಳಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಅಂಚಾರ್ಲಹಳ್ಳಿಯ ನವೀನ್ ಕುಮಾರ್ ಜೊತೆ ಅವರ ಮದುವೆ ಮಾಡಲಾಗಿತ್ತು. ಮದುವೆ ಸಮಯದಲ್ಲಿ ಪೋಷಕರು 750 ಚಿನ್ನಾಭರಣ ನೀಡಿ ದೊಡ್ಡಬಳ್ಳಾಪುರದಲ್ಲಿ ಅದ್ದೂರಿ ಮದುವೆ ಮಾಡಿಕೊಟ್ಟಿದ್ದರು.
ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ನವೀನ್ ಕುಮಾರ್’ಗೆ ಹಣದಾಹ ಇತ್ತು, ವರದಕ್ಷಿಣೆ ಹಣಕ್ಕಾಗಿ ಪದೇ ಪದೇ ಹೆಂಡತಿಯನ್ನು ತವರು ಮನೆಗೆ ಕಳಿಸುತ್ತಿದ್ದ. ಮಗಳ ಸುಖ ಸಂತೋಷಕ್ಕಾಗಿ ಹೆತ್ತವರು ಹಣವನ್ನು ಕೊಟ್ಟು ಕಳಿಸುತ್ತಿದ್ದರು. ಇದೇ ರೀತಿ ಫೆ. 9ರಂದು ಸಹ 1 ಲಕ್ಷ 20 ಸಾವಿರ ಹಣವನ್ನು ಕೊಟ್ಟು ಕಳಿಸಿದ್ದರು ಎನ್ನಲಾಗಿದೆ.
ಇಷ್ಟಕ್ಕೂ ಸುಮ್ಮನಾಗದ ಪತಿಯ ಮನೆಯವರು ಮಗಳನ್ನೇ ಕೊಂದು ಹಾಕಿದ್ದಾರೆಂದು ಮೃತಳ ತಂದೆ ತಾಯಿ ಆರೋಪ ಮಾಡಿದ್ದಾರೆ.
ತನುಶ್ರೀ ಸಾವಿಗೆ ಅತ್ತೆ ಸುವರ್ಣಮ್ಮ, ಮೈದುನ ಕಿರಣ್ ಕುಮಾರ್, ಗಂಡ ನವೀನ್ ಕುಮಾರ್ ಕಾರಣರಾಗಿದ್ದು, ಎಲ್ಲಾ ಸೇರಿ ಹೊಡೆದು ಕೊಲೆಮಾಡಿದ್ದು ತಕ್ಕ ಶಿಕ್ಷೆಯಾಗಬೇಕೆಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.