ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಆರೋಪಿಗಳ ವೈದ್ಯಕೀಯ ಪರೀಕ್ಷೆ

Prasthutha|

ಮೈಸೂರು: ಇಲ್ಲಿನ ಚಾಮುಂಡಿ ತಪ್ಪಲಲ್ಲಿ ವಿದ್ಯಾರ್ಥಿನಿ ಮೇಲೆ ಮೇಲೆ ಗ್ಯಾಂಗ್ ರೇಪ್ ಪ್ರಕರಣದ ಬಂಧಿತ ಆರೋಪಿಗಳಿಗೆ ಇಂದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ನಗರಕ್ಕೆ ಆಗಮಿಸಿದ ತಜ್ಞರ ವೈದ್ಯರ ತಂಡ ಆರೋಪಿಗಳ ವೈದ್ಯಕೀಯ ತಪಾಸಣೆ ನಡೆಸಿ ರಕ್ತ, ಮೂತ್ರ, ಕೂದಲು ಹಾಗೂ ಚರ್ಮದ ಇನ್ನಿತರ ಎಲ್ಲಾ ಸ್ಯಾಂಪಲ್ಗಳನ್ನು ಸಂಗ್ರಹಿಸಿದೆ.

- Advertisement -


ಸ್ಯಾಂಪಲ್ ಗಳನ್ನು ನಗರದ ಪೊಲೀಸ್ ಅಕಾಡೆಮಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಲ್ಯಾಬ್ ಟೆಕ್ನಿಷಿಯನ್ಸ್ ಮತ್ತು ತಜ್ಞರು ಪರೀಕ್ಷೆ ನಡೆಸಲಿದ್ದು ಸಂಪೂರ್ಣ ವರದಿ ಕೈಸೇರುವ ವರೆಗೂ ತಜ್ಞರ ತಂಡ ನಗರದಲ್ಲಿಯೇ ಬೀಡು ಬಿಡಲಿದೆ. ಆರೋಪಿಗಳ ಬಂಧನದ ಬಳಿಕವೂ ಘಟನೆಯ ಬಗ್ಗೆ ಹೇಳಿಕೆ ನೀಡುವುದಕ್ಕೆ ಸಂತ್ರಸ್ತೆ ನಿರಾಕರಿಸುತ್ತಿದ್ದು ಆಕೆಯ ಸ್ನೇಹಿತ ಕೂಡ ಅಸ್ಪಷ್ಟ ಹೇಳಿಕೆಗಳನ್ನು ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆಯ ವರದಿಯು ನ್ಯಾಯಾಲಯದ ವಿಚಾರಣೆಯಲ್ಲಿ ಮಹತ್ವದ ಸಾಕ್ಷ್ಯಾಧಾರ ಆಗಲಿದೆ.


ಕೃತ್ಯದ ಸಂಬಂಧ ಸಂತ್ರಸ್ತೆ ಜತೆಗಿದ್ದ ಸ್ನೇಹಿತನ ಹೇಳಿಕೆ ಆಧರಿಸಿ ಎಫ್ಐಆರ್ ದಾಖಲಾಗಿದೆ. ಸಿಆರ್ಪಿಸಿ ಸೆಕ್ಷನ್ 164ರ ಅಡಿ ಸಂತ್ರಸ್ತೆ ತನಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಬೇಕಾಗಿದೆ. ಸಂತ್ರಸ್ತೆ ಹೇಳಿಕೆ ನೀಡಿದರೆ ಅದು ಮಹತ್ವದ ಸಾಕ್ಷ್ಯವಾಗಲಿದೆ. ಆಗ ಸರ್ಕಾರಕ್ಕೂ ಪೊಲೀಸರು ವರದಿಯನ್ನು ನೀಡಬಹುದು. ಆದರೆ ಸಂತ್ರಸ್ತೆ ಮಾತ್ರ ಹೇಳಿಕೆ ನೀಡುವುದಕ್ಕೆ ನಿರಾಕರಣೆ ಮಾಡುತ್ತಿದ್ದಾರೆ.

- Advertisement -


ಅತ್ಯಾಚಾರ ಕೃತ್ಯದಲ್ಲಿ 6 ಮಂದಿ ಭಾಗಿಯಾಗಿದ್ದಾರೆ ಎಂದು ಸಂತ್ರಸ್ತೆಯ ಸ್ನೇಹಿತ ಹೇಳಿಕೆ ನೀಡಿದ್ದ. ಆದರೆ ಪೊಲೀಸರ ತನಿಖೆ ವೇಳೆ ಇನ್ನೋರ್ವ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ಐವರು ಬಂಧನಕ್ಕೊಳಗಾಗಿದ್ದು, ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ. ಇನ್ನು ಆರೋಪಿಗಳನ್ನು ಬಂಧಿಸಲು ಪೊಲೀಸರು ನಡೆಸಿದ ಕಾರ್ಯಾಚರಣೆ ರೋಚಕವಾಗಿತ್ತು. ಬಂಧಿಸಿರುವ ಆರೋಪಿಗಳಲ್ಲಿರುವ ಅಪ್ರಾಪ್ತನ ವಯಸ್ಸನ್ನು ದೃಢೀಕರಿಸಲು ಆತನ ದಾಖಲಾತಿ ಸಂಗ್ರಹದಲ್ಲಿ ತೊಡಗಿದ್ದಾರೆ. ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಮತ್ತಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ

Join Whatsapp