ಚೆನ್ನೈ: 12578 ಮೈಸೂರು-ದರ್ಭಾಂಗ ಬಾಗ್ಮತಿ ಎಕ್ಸ್‌ಪ್ರೆಸ್ ರೈಲು ಚೆನ್ನೈ-ಗುಡೂರು ವಿಭಾಗದಲ್ಲಿ ಚೆನ್ನೈ ಸೆಂಟ್ರಲ್‌ನಿಂದ 41 ಕಿಲೋಮೀಟರ್ ದೂರದಲ್ಲಿರುವ ಕವರೈಪೆಟ್ಟೈ ನಿಲ್ದಾಣದಲ್ಲಿ ನಿಂತಿದ್ದ ಸರಕು ರೈಲಿಗೆ ಹಿಂಭಾಗದಿಂದ ಡಿಕ್ಕಿ ಹೊಡೆದ ಪರಿಣಾಮ ಆದರಲ್ಲಿದ್ದ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಇದರಿಂದಾಗಿ ಬಾಗಮತಿ ಎಕ್ಸ್‌ಪ್ರೆಸ್‌ನ 12 ಬೋಗಿಗಳು ಹಳಿತಪ್ಪಿವೆ.
ಅಪಘಾತದಿಂದಾಗಿ ಚೆನ್ನೈ-ಗುಡೂರು ವಿಭಾಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ.
ಹಳಿತಪ್ಪಿದ ಬೋಗಿಗಳಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಸ್ಥಳಾಂತರಿಸಲಾಗುತ್ತಿದೆ. ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗ ನೀಡಿರುವ ಮಾಹಿತಿಯ ಪ್ರಕಾರ ರಾತ್ರಿ 9:56 ರವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ.
ಅಧಿಕೃತ ಮೂಲಗಳ ಪ್ರಾಥಮಿಕ ಮಾಹಿತಿಯ ಪ್ರಕಾರ ಬಾಗಮತಿ ಎಕ್ಸ್‌ಪ್ರೆಸ್ ಗೆ ಮುಖ್ಯ ಮಾರ್ಗದಲ್ಲಿ ಗುಡೂರು ಕಡೆಗೆ ತೆರಳಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ, ಅದು ತಪ್ಪಾಗಿ ಕವರೈಪೆಟ್ಟೈ ನಿಲ್ದಾಣದ ಲೂಪ್ ಲೈನ್ ಅನ್ನು ಪ್ರವೇಶಿಸಿತು, ಅಲ್ಲಿ ಸರಕು ರೈಲು ನಿಂತಿತ್ತು. ಘಟನೆಯು ಮಾನವ ದೋಷದಿಂದ ಸಂಭವಿಸಿದೆಯೇ ಅಥವಾ ತಾಂತ್ರಿಕ ದೋಷದಿಂದ ಸಂಭವಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಖ್ಯ ಮಾರ್ಗಕ್ಕೆ ತೆರಳಲು ಸಿಗ್ನಲ್ ನೀಡಿದಾಗ ಲೂಪ್ ಲೈನ್‌ಗೆ ಹಳಿಗಳನ್ನು ಸೆಟ್ ಮಾಡಲಾಗಿತ್ತೇ ಎಂದು ತನಿಖೆ ಮಾಡಲು ಹಿರಿಯ ರೈಲ್ವೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.