ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಾಂಕ ನಿಗದಿಯಾಗಿದೆ. ಇದೇ ಅ.3 ರಿಂದ ಅ.12 ರ ವರೆಗೆ ಮೈಸೂರು ದಸರಾ ಮಹೋತ್ಸವ ಜರುಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.
ಸಿದ್ದರಾಮಯ್ಯ ಅವರು ಸೋಮವಾರ ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಾಡಹಬ್ಬ ಮೈಸೂರು ದಸರಾ 2024 ಉನ್ನತ ಮಟ್ಟದ ಸಭೆಯನ್ನು ಅಧಿಕಾರಿಗಳೊಂದಿಗೆ ನೆಡೆಸಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಕ್ಟೋಬರ್ 3 ರಂದು ದಸರಾ ಉದ್ಘಾಟನೆಯಾಗಲಿದ್ದು, ಅ.12 ರಂದು ಜಂಬೂಸವಾರಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ದಸರಾ ಮಹೋತ್ಸವ ಜನರ ಉತ್ಸವ ಆಗಬೇಕು. ಕಳೆದ ವರ್ಷ ಕೊರೋನಾ-ಬರಗಾಲ ಕಾರಣಕ್ಕೆ ಹೆಚ್ಚು ವಿಜ್ರಂಭಣೆ ಮಾಡಲಿಲ್ಲ. ಈ ಬಾರಿ ವಿಜ್ರಂಭಣೆ ಇರಲಿ” ಎಂದು ಸೂಚಿಸಿದರು.
“ರಾಜ್ಯದಲ್ಲಿ ಉತ್ತಮ ಮಳೆ,ಸಮೃದ್ದಿಯ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಅಕ್ಟೋಬರ್ 3 ರಿಂದ 12 ರವರೆಗೆ ನಡೆಯಲಿರುವ ದಸರಾ ನಡೆಯಲಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕು. ನಮ್ಮ ಕಲಾವಿದರು ಹೆಚ್ಚು ಸಮರ್ಥರಿದ್ದಾರೆ. ಟ್ಯಾಬ್ಲೋಗಳು ಹೆಚ್ಚು ಆಕರ್ಷಕ ಮತ್ತು ಅರ್ಥಪೂರ್ಣವಾಗಿರಬೇಕು. ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆ, ಆಹಾರ, ವಸ್ತು ಪ್ರದರ್ಶನ, ಕುಸ್ತಿ ಪ್ರದರ್ಶನ, ದೀಪಾಂಲಕಾರ ಸೇರಿ ಪ್ರತಿಯೊಂದೂ ಆಕರ್ಷಣೀಯ ಮತ್ತು ಅರ್ಥಪೂರ್ಣ ಆಗಿರಬೇಕು” ಎಂದು ಹೇಳಿದರು.