► 2 ತಿಂಗಳಲ್ಲಿ 21 ಬಾರಿ ಕಲ್ಲು ತೂರಾಟಕ್ಕೆ ಒಳಗಾದ ವಂದೇ ಭಾರತ್ ಎಕ್ಸ್ಪ್ರೆಸ್
ಬೆಂಗಳೂರು: ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದ ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸಪ್ರೆಸ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿರುವ ಘಟನೆ ಕೆ ಆರ್ ಪುರಂ ಹಾಗೂ ಕಂಟೋನ್ಮೆಂಟ್(ದಂಡು) ರೇಲ್ವೆ ನಿಲ್ದಾಣದ ಮಧ್ಯೆ ನಡೆದಿದೆ.
ಕಲ್ಲು ತೂರಾಟದಿಂದ ರೈಲಿನ 2 ಗಾಜಗಳಿಗೆ ಹಾನಿಯಾಗಿದ್ದು, ಕೆಲ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಲು ತೂರಾಟ ನಡೆಸಿ ಪರಾರಿಯಾಗಿರುವ ಕಿಡಿಗೇಡಿಗಳಿಗಾಗಿ ರೈಲ್ವೇ ಪೊಲೀಸರು ಬಲೆ ಬೀಸಿದ್ದು, ರೇಲ್ವೆ ಇಲಾಖೆಗೆ ಸಂಬಂಧಿಸಿದ ವಸ್ತುಗಳಿಗೆ ಹಾನಿಯುಂಟು ಮಾಡಿದರೆ, ಅಂತವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹಲವೆಡೆ ಗಸ್ತು
ಈ ನಡುವೆ ಕಲ್ಲು ತೂರಾಟದ ಬಗ್ಗೆ ರೇಲ್ವೆ ಇಲಾಖೆ ವಿಷಾದ ವ್ಯಕ್ತಪಡಿಸಿದ್ದು, ಸ್ಥಳೀಯ ಪೊಲೀಸರ ಜೊತೆಗೂಡಿ ಕಂಟೋನ್ಮೆಂಟ್ ಹಾಗೂ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಬೆಳಗ್ಗೆ 8.30 ರಿಂದ ವಂದೇ ಭಾರತ್ ರೈಲು ಬಂದು, ಹೋಗವವರೆಗು ಟ್ರ್ಯಾಕ್ ಪ್ಯಾಟ್ರೋಲಿಂಗ್ (ಗಸ್ತು) ಮಾಡುತ್ತಿದ್ದಾರೆ.
ಟ್ಯಾನರಿ ರಸ್ತೆ ಬ್ರಿಡ್ಜ್, ಕಲ್ಲಪಲ್ಲಿ ಸ್ಮಶಾನ, ಜೀವನಹಳ್ಳಿ ಸೇರಿ ಹಲವು ಕಡೆಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಹಾಗೇ ಬೆಂಗಳೂರು ಸಿಟಿ, ಕೆಂಗೇರಿ, ಹೆಜ್ಜಾಲ, ಕಂಟೋನ್ಮೆಂಟ್ ನಿಂದ ಸಿಟಿ ಹೊರ ಭಾಗದಲ್ಲೂ ಟ್ರ್ಯಾಕ್ ಪ್ಯಾಟ್ರೋಲಿಂಗ್ ನಡೆಯುತ್ತಿದೆ.
2 ತಿಂಗಳಲ್ಲಿ 21 ಕಲ್ಲು ತೂರಾಟ
ಬೆಂಗಳೂರು ವಿಭಾಗದಲ್ಲಿ ಇನ್ನೂ 13 ಪ್ರಕರಣಗಳು ದಾಖಲಾಗಿವೆ ಎಂದು ನೈರುತ್ಯ ರೇಲ್ವೆ ಇಲಾಖೆ ಮಾಹಿತಿ ನೀಡಿದೆ. ಎರಡು ವಾರಗಳ ಹಿಂದೆ,ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಮೂಲಕ ಹಾದು ಹೋಗುತ್ತಿದ್ದಾಗ ಕಿಡಿಗೇಡಿಗಳು ಕಲ್ಲು ತೂರಿದ್ದರು. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ, ಕಲ್ಲು ತೂರಾಟದಿಂದಾಗಿ ಒಂದು ಕಿಟಕಿಗೆ ಹಾನಿಯಾಗಿದೆ.
ಈ ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಾಗಿದೆ. ಇದನ್ನು ಕಳೆದ ವರ್ಷ 2022ರ ನವೆಂಬರ್ನಲ್ಲಿ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಈ ರೈಲು ಬೆಂಗಳೂರು, ಮೈಸೂರಿನಿಂದ, ತಮಿಳುನಾಡಿನ ಚೆನ್ನೈಗೆ ಸಂಪರ್ಕಿಸುತ್ತದೆ. ಇದನ್ನು ಮೇಕ್-ಇನ್-ಇಂಡಿಯಾ ಉಪಕ್ರಮದ ಅಡಿಯಲ್ಲಿ ತಯಾರು ಮಾಡಲಾಗಿದೆ.