ಮೈಸೂರು: ಮುಡಾ, ವಾಲ್ಮೀಕಿ ಹಗರಣ ವಿರುದ್ಧ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಜೊತೆಯಾಗಿ ಹಮ್ಮಿಕೊಂಡಿರುವ ‘ಮೈಸೂರು ಚಲೋ’ ಪಾದಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನಲ್ಲಿ ನಡೆಯುತ್ತಿದೆ.
ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಮಾಜಿ ಡಿಸಿಎಂ ಶ್ರೀರಾಮುಲು, ವಿಪಕ್ಷ ನಾಯಕ ಆರ್.ಅಶೋಕ್ ಸಮಾವೇಶದಲ್ಲಿ ಭಾಗವಹಿಸಿದ್ದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್ ಶವಯಾತ್ರೆಯ ಪಾದಯಾತ್ರೆ ಇದು. ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳು ಸಾವು ಉಚಿತ. ರೈತರಿಗೆ ಸಾವು ಉಚಿತ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅಧಿಕಾರದಲ್ಲಿ ಇರುವ ತನಕ ಪ್ರಾಮಾಣಿಕ ಅಧಿಕಾರಿಗಳ ಜೀವಕ್ಕೆ ಇಲ್ಲಿ ರಕ್ಷಣೆ ಇಲ್ಲ. ವಿಧಾನಸೌಧದಿಂದ ಸಿದ್ದರಾಮಯ್ಯ ಓಡಿ ಹೋಗಿದ್ದಕ್ಕೆ ನಾವು ಪಾದಯಾತ್ರೆ ಮಾಡಿದ್ದೇವೆ. ಸಿಎಂ ರಾಜೀನಾಮೆ ಕೊಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ದಾಸ್ ಅಗರವಾಲ್ ಮಾತನಾಡಿ, ನಿನ್ನೆ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಒಂದು ಸಾವಿರ ಒಬ್ಬರಿಗೆ ಕೊಟ್ಟು ಜನರನ್ನು ಕರೆಸಲಾಗಿತ್ತು. ನಮ್ಮ ಪಾದಯಾತ್ರೆಗೆ ಹೆದರಿ ದುಡ್ಡು ಖರ್ಚು ಮಾಡಿ ಸಮಾವೇಶ ಮಾಡುವ ಅಗತ್ಯ ಕಾಂಗ್ರೆಸ್ಗೆ ಇತ್ತಾ? ಕಾಂಗ್ರೆಸ್ ಯಾವಾಗಲೂ ಲೂಟಿ ಮಾಡುವುದು ಲೂಟಿ ಮಾಡಿದ ಹಣವನ್ನು ಹೀಗೆ ಖರ್ಚು ಮಾಡುವುದು ಕಾಂಗ್ರೆಸ್ ಅಭ್ಯಾಸ. ನಿನ್ನೆಯ ಕಾಂಗ್ರೆಸ್ ರ್ಯಾಲಿ ಲೂಟಿ ರ್ಯಾಲಿ. ನಮ್ಮದು ಜನತಾ ರ್ಯಾಲಿ. ಸಿದ್ದರಾಮಯ್ಯ ತಮ್ಮ ಸ್ಥಾನ ಖಾಲಿ ಮಾಡುವವರೆಗೂ ಜನರ ಜೊತೆ ಸೇರಿ ಹೋರಾಟ ಮಾಡುತ್ತೇವೆ. ಡಿಕೆ ಶಿವಕುಮಾರ್ ಇತಿಹಾಸ ಯಾರಿಗೆ ಗೊತ್ತಿಲ್ಲ ಹೇಳಿ? ಡಿಕೆ ಶಿವಕುಮಾರ್ ಆಸ್ತಿ ಮೊದಲು ಎಷ್ಟಿತ್ತು? ಈಗ ಎಷ್ಟಾಗಿದೆ? ಡಿಕೆ ಶಿವಕುಮಾರ್ಗೆ ಇಷ್ಟು ಹಣ ಎಲ್ಲಿಂದ ಬಂತು? ಕರ್ನಾಟಕವನ್ನು ಡಿ.ಕೆ. ಶಿವಕುಮಾರ್ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.