ಲಖನೌ : 2013ರಲ್ಲಿ ಮುಝಾಫರ್ ನಗರ ಗಲಭೆಗೂ ಮೊದಲು ನಾಗ್ಲಾ ಮಂಡೋರ್ ಗ್ರಾಮದಲ್ಲಿ ಸಂಘಟಿಸಲಾಗಿದ್ದ ಮಹಾಪಂಚಾಯತ್ ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪ ಹೊಂದಿರುವ ಮೂವರು ಬಿಜೆಪಿ ಶಾಸಕರ ವಿರುದ್ಧದ ಪ್ರಕರಣ ಕೈಬಿಡಲು ಸಿಎಂ ಯೋಗಿ ಆದಿತ್ಯನಾಥ್ ಸರಕಾರ ಪ್ರಕ್ರಿಯೆ ಆರಂಭಿಸಿದೆ ಎಂದು ವರದಿಗಳು ತಿಳಿಸಿವೆ.
ಶಾಸಕರುಗಳಾದ ಸಂಗೀತ್ ಸೋಮ್, ಸುರೇಶ್ ರಾಣಾ, ಕಪಿಲ್ ದೇವ್ ವಿರುದ್ಧ ಶಿಖೇಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಿಜೆಪಿ ಬೆಂಬಲಿಗ ವಿವಾದಿತ ಧಾರ್ಮಿಕ ನಾಯಕಿ ಸಾಧ್ವಿ ಪ್ರಾಚಿ ವಿರುದ್ಧವೂ ಈ ಪ್ರಕರಣದಲ್ಲಿ ಪ್ರಚೋದನಕಾರಿ ಭಾಷಣದ ಆರೋಪದ ದೂರು ದಾಖಲಾಗಿತ್ತು.
ನಿಷೇಧಾಜ್ಞೆಯನ್ನು ಉಲ್ಲಂಘಿಸಿದ, ಸರಕಾರಿ ಅಧಿಕಾರಿಗಳ ಜೊತೆ ವಾಗ್ವಾದ ಮಾಡಿದ ಮತ್ತು ಬೆಂಕಿ ಹಚ್ಚಿದುದರಲ್ಲಿ ಭಾಗಿಯಾದ ಪ್ರಕರಣವೂ ಬಿಜೆಪಿ ನಾಯಕರ ವಿರುದ್ಧ ದಾಖಲಾಗಿತ್ತು.
ಪ್ರಕರಣ ಹಿಂಪಡೆಯುವ ಬಗ್ಗೆ ಸಂಬಂಧಪಟ್ಟ ಕೋರ್ಟ್ ನಲ್ಲೂ ಅರ್ಜಿ ದಾಖಲಿಸಲಾಗಿದೆ. ಅರ್ಜಿಯ ವಿಚಾರಣೆ ಬಾಕಿಯಿದೆ.
2013, ಸೆ.7ರಂದು ಜಾಟ್ ಸಮುದಾಯ ಮಹಾಪಂಚಾಯತ್ ಸಮಾವೇಶ ಆಯೋಜಿಸಿತ್ತು. 2013, ಆ.27ರಂದು ಇಬ್ಬರು ಯುವಕರ ಹತ್ಯೆಯ ಬಗ್ಗೆ ಮುಂದಿನ ನಡೆಯನ್ನು ನಿರ್ಧರಿಸಲು ಸಭೆ ಕರೆಯಲಾಗಿತ್ತು. ಮಹಾಪಂಚಾಯತ್ ನಿಂದ ಹಿಂದಿರುಗುವಾಗ ಗಲಭೆ ಸಂಭವಿಸಿತ್ತು. 65 ಮಂದಿಯನ್ನು ಹತ್ಯೆ ಮಾಡಲಾಯಿತು. 40,000 ಮಂದಿಯನ್ನು ಸ್ಥಳಾಂತರಿಸಲಾಯಿತ್ತು. 510 ಪ್ರಕರಣಗಳು ದಾಖಲಾಗಿದ್ದವು. 175 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು.