ನ್ಯಾಯದ ನಿರೀಕ್ಷೆ ಕಳೆದುಕೊಂಡ ಮುಝಫ್ಫರ್ ನಗರ ಗಲಭೆ ಸಂತ್ರಸ್ತೆ

Prasthutha|

►► ಗಲಭೆಯಲ್ಲಿ ಪತಿ, ಪುತ್ರಿಯನ್ನು ಕಳೆದ ನಿಮ್ಮಿಯ ಕಥೆ, ವ್ಯಥೆ

- Advertisement -

ನಿಮ್ಮಿ ಈಗ ಮುಝಫ್ಫರ್ ನಗರದ ಕಿದ್ವಾಯಿ ನಗರದಲ್ಲಿ ನೆಲೆಸುತ್ತಿದ್ದಾರೆ. ಅವರ ಹೆಸರು ನಈಮಾ ಆಗಿರಬಹುದು. ಆದರೆ ಅವರು ಎಂದಿಗೂ ಶಾಲೆಗೆ ಹೋಗಿಲ್ಲ ಮತ್ತು ಅವರನ್ನು ನಈಮಾ ಎಂದು ಯಾರೂ ಕರೆದೂ ಇಲ್ಲ. ನಿಮ್ಮಿಯ ತಂದೆ ಶಫೀಕ್ ಆಕೆಯನ್ನು ಆಕೆಯ ಸಹೋದರಿಯೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಇಬ್ಬರನ್ನೂ ಒಂದೇ ಮನೆಗೆ ಮದುವೆ ಮಾಡಿ ಕಳುಹಿಸಿದ್ದರು. ಆಗ 14ರ ಹರೆಯದವರಾಗಿದ್ದ ನಿಮ್ಮಿ ಈಗ 50 ವರ್ಷ. ವಿವಾಹದ ಖರ್ಚನ್ನುಉಳಿಸುವುದಕ್ಕಾಗಿ ಅವರ ತಂದೆ ಇಬ್ಬರನ್ನೂ ಒಂದೇ ಮನೆಯಲ್ಲಿ ಸಹೋದರರಿಗೆ ಮದುವೆ ಮಾಡಿ ಕೊಟ್ಟಿದ್ದರು. ಅವರನ್ನು ಮದುವೆ ಮಾಡಿ ಕೊಡಲಾದ ಗ್ರಾಮದ ಹೆಸರು ಬಹಾವಡಿ. ಇಲ್ಲಿ ನಡೆದ ಹತ್ಯಾಕಾಂಡಕ್ಕಾಗಿ ಶಾಮ್ಲಿ ಜಿಲ್ಲೆಯ ಈ ಗ್ರಾಮ ಚರ್ಚೆಯಲ್ಲಿತ್ತು. ಈ ಗ್ರಾಮಕ್ಕೆ ಹೋಗಲು ಪಿಎಸಿ ತಂಡವೊಂದು ನಿರಾಕರಿಸಿತ್ತು. ಇಲ್ಲಿಗೆ ವಿಶೇಷ ಕರ್ತವ್ಯದ ಮೇಲೆ ಕಳುಹಿಸಲಾದ ಐಪಿಎಸ್ ರಘುವೀರ್ ಲಾಲ್ ಸ್ವತ ತಾವೇ ಬಂದೂಕು ಹಿಡಿದು ದಂಗೆಕೋರರೊಂದಿಗೆ ಹೋರಾಡಿದ್ದರು. ಅದು ತನ್ನ ಜೀವನದ ಅತೀ ದೊಡ್ಡ ದಿನವೆಂದು ರಘುವೀರ್ ಲಾಲ್ ಯಾವಾಗಲೂ ಹೇಳುತ್ತಿದ್ದರು. ಅಂದು ತನ್ನ ಪತ್ನಿ ತನ್ನನ್ನು ಅಪ್ಪಿ ಹಿಡಿದು ಅತ್ತಿದ್ದಳು ಮತ್ತು ತಂದೆ ‘ನೀನು ನನ್ನ ಮಗ’ ಎನ್ನಲು ಹೆಮ್ಮೆಯಾಗುತ್ತಿದೆ ಎಂದಿದ್ದರು ಎಂಬುದಾಗಿ ಲಾಲ್ ಹೇಳಿದ್ದರು.

ನಿಮ್ಮಿ ಇದೇ ಗ್ರಾಮದಲ್ಲಿ ವಿಧವೆಯಾಗಿದ್ದರು. 2013ರ ಡಿಸೆಂಬರ್ 8ರ ಬೆಳಗ್ಗೆ 9 ಗಂಟೆಗೆ ಶಾಮ್ಲಿ ಜಿಲ್ಲೆಯ ಈ ಗ್ರಾಮದಲ್ಲಿ ನಿಮ್ಮಿಯ ಅಮಾಯಕ ಪುತ್ರಿ ಮತ್ತು ಪತಿಗೆ ಗೋಲಿ ತಗುಲಿತ್ತು.

- Advertisement -

“ನಾವು ನಮ್ಮ ಜೀವವನ್ನು ಕೈಯಲ್ಲಿ ಹಿಡಿದು ಓಡುತ್ತಿದ್ದೆವು. ಒಂದು ಗಾಡಿಯಲ್ಲಿ 15-16 ಜನರಿದ್ದೆವು. ಮೊದಲು ಅದರಲ್ಲಿ ಐದು ಮಂದಿ ಮಾತ್ರವೇ ಕುಳಿತುಕೊಳ್ಳುತ್ತಿದ್ದೆವು. ನನ್ನ ಪತಿ ಸೇರಿದಂತೆ ಕೆಲವರು ಉಳಿದುಕೊಂಡರು. ನನ್ನ ಇಬ್ಬರು ಪುತ್ರಿಯರು ಪ್ರೌಢರಾಗಿದ್ದರು. ಹಾಗಾಗಿ ಮೊದಲು ಅವರನ್ನು ರಕ್ಷಿಸಿಕೊಳ್ಳುವುದು ಅಗತ್ಯವಾಗಿತ್ತು. ಅದಕ್ಕಾಗಿ ಅವರ ತಂದೆ ಬಲಿಯರ್ಪಿಸಿಕೊಂಡರು. ನನ್ನ 11ರ ಹರೆಯದ ಮಗಳು ಹೇಗೆ ಸಾವನ್ನಪ್ಪಿದಳೆಂದು ನನಗೆ ತಿಳಿದಿಲ್ಲ. ಅವಳು ಅಡುಗೆಮನೆಯಲ್ಲಿ ಅವಿತಿದ್ದಳು. ಅಡ್ಡಾದಿಡ್ಡಿ ಬಾರಿಸಲಾದ ಗೋಲಿ ಅವಳಿಗೂ ತಗುಲಿತ್ತು. ಗೋಲಿ ಯಾರೊಂದಿಗೆ ಕರುಣೆ ತೋರಿಸುತ್ತದೆ. ಆ ನಂತರ ಪೊಲೀಸರು ಬಂದರು. ಅವರಿಂದಾಗಿ ಇನ್ನು ಕೆಲವು ಜನರು ಬಚಾವಾದರು” ಎಂದು ನಿಮ್ಮಿ ಹೇಳಿರುವುದಾಗಿ ‘ಟು ಸರ್ಕಲ್.ನೆಟ್’ ವರದಿ ಮಾಡಿದೆ.

“ನನ್ನ ಪತಿ ಸೈಕಲ್ ಮೇಲೆ ಗ್ರಾಮ ಗ್ರಾಮಕ್ಕೆ ತೆರಳಿ ಪಾತ್ರೆಗಳನ್ನು ಮಾರುತ್ತಿದ್ದರು. ಆ ಸೈಕಲ್ ಕೂಡ ಅಲ್ಲೇ ಉಳಿದಿದೆ. ಎಲ್ಲಾವೂ ಅಲ್ಲೇ ಉಳಿದಿದೆ. ನಾವು ಎಂದಿಗೂ ಅಲ್ಲಿಗೆ ಹಿಂದಿರುಗಿ ಹೋಗಲಿಲ್ಲ. ಮುಂದೆಯೂ ಅಲ್ಲಿಗೆ ಹಿಂದಿರುಗಲಾರೆವು. ನಮ್ಮಲ್ಲಿ ಯಾರೂ ಅಲ್ಲಿ ನೆಲೆಸುತ್ತಿಲ್ಲ. ಈಗ ಯಾರಾದರೂ ಅಲ್ಲಿನ ಕುರಿತು ಮಾತನಾಡಿದರೆ ಕೆಲವು ಜಾಟರಿಗೆ ಪಶ್ಚಾತ್ತಾಪವಿದೆ ಎಂದು ಹೇಳುತ್ತಾರೆ. ನಮ್ಮಂತಹ ಕೆಲವು ಜನರನ್ನು ಗ್ರಾಮಕ್ಕೆ ಮರಳಿಸಲು ಕೆಲವರು ಪ್ರಯತ್ನಪಟ್ಟರು. ನಮಗೆ ಜಾಟರೊಂದಿಗೆ ಯಾವ ಬೇಸರವೂ ಇಲ್ಲ. ಅವರಲ್ಲಿ ಕೆಲವರು ಒಳ್ಳೆಯವರೂ ಇದ್ದಾರೆ, ಇನ್ನೂ ಕೆಲವರು ಕೆಟ್ಟವರೂ ಇದ್ದಾರೆ” ಎಂದು ನಿಮ್ಮಿ ಹೇಳುತ್ತಾರೆ.

ನಿಮ್ಮಿಗೆ 10 ಮಂದಿ ಮಕ್ಕಳಿದ್ದರು. ಈಗ ಉಳಿದಿರುವುದು 8 ಮಂದಿ ಮಾತ್ರ. ಒಬ್ಬ 11 ವರ್ಷದ ಹುಡುಗಿ ಗಲಭೆಯಲ್ಲಿ ಸಾವನ್ನಪ್ಪಿದರೆ, ಕಳೆದ ವರ್ಷ ಓರ್ವ ಚಿಕ್ಕ ಮಗ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೋರ್ವ ಮಗ ನಿಗೆ ಉದ್ಯೋಗ ದೊರೆತಿದೆ. ಆತ ನಿಮ್ಮಿಗೆ ತಿಂಗಳಿಗೆ 3000 ರೂಪಾಯಿ ಕೊಡುತ್ತಾನೆ. ತನಗೆ ದೊರೆತ  ಪರಿಹಾರ ಹಣದಲ್ಲಿ ನಿಮ್ಮಿ ತನ್ನ ಮೂವರು ಪುತ್ರಿಯರ ಮದುವೆ ಮಾಡಿಸಿದ್ದಾರೆ.

ನಿಮ್ಮಿಯ ತಂದೆ ಶಫೀಕ್ 72ರ ಹರೆಯದವರು. ಗಲಭೆಯ ವೇಳೆ ಅವರು ನೆರವಿಗಾಗಿ ಸ್ಥಳೀಯ ಮುಹಮ್ಮದ್ ಎಂಬವರನ್ನು ಭೇಟಿಯಾಗಿದ್ದರು. ಮುಹಮ್ಮದ್ ಹೇಳುವಂತೆ, ಶಫೀಕ್ ಅವರ ಮನೆಯ ಪಕ್ಕದಲ್ಲೇ ನೆಲೆಸುತ್ತಿದ್ದರು. ಡಿಸೆಂಬರ್ 8 ರಂದು ವಿಷಯ ತಿಳಿದಾಗ ಬಹಳ ಪ್ರಕ್ಷುಬ್ಧಗೊಂಡು ಮುಹಮ್ಮದ್ ರನ್ನು ಭೇಟಿಯಾಗಲು ಬಂದಿದ್ದರು.

“ಗಲಭೆ ನಡೆಯುತ್ತಿತ್ತು. ಈಗ ಅಲ್ಲಿ ಆಸ್ಪತ್ರೆಗೆ ಹೋಗಬೇಕು, ದೂರು ನೀಡಬೇಕು, ದಫನ ಮಾಡಬೇಕು. ಇಂತಹ ದೊಡ್ಡ ವಿಷಯಗಳು ಆಗಬೇಕಿತ್ತು. ಆ ಸಂದರ್ಭದಲ್ಲಿ ಸತ್ಯಪಾಲ್ ಸಿಂಗ್ ನಗರದ ಪೊಲೀಸ್ ಅಧಿಕಾರಿಯಾಗಿದ್ದರು. ನನಗೆ ಚೆನ್ನಾಗಿ ಅವರ ಪರಿಚಯವಿತ್ತು. ಅವರು ಕೂಡ ಜಾಟರಾಗಿದ್ದರು. ಆದರೆ ಉತ್ತಮ ಮನುಷ್ಯನಾಗಿದ್ದರು. ಅವರು ತುಂಬಾ ನೆರವಾದರು. ಪೊಲೀಸ್ ತಂಡವನ್ನು ನಮ್ಮೊಂದಿಗೆ ಕಳಿಸಿದರು. ನಾನು ಆ ಹತ್ಯಾಕಾಂಡವನ್ನು ಕಂಡೆನು. ಆಸ್ಪತ್ರೆಯಲ್ಲಿ ಶವಗಳ ರಾಶಿ ಬಿದ್ದುಕೊಂಡಿರುವುದನ್ನು ಕಂಡೆನು. ಹಿಂಸಾಚಾರ ನಡೆಯುತ್ತಿದ್ದ ರಸ್ತೆಯಲ್ಲಿ ನಾವು ಸಾಗಿ ಹೋದೆವು. ನಾವು ಹೋಗಿ ಗ್ರಾಮದಲ್ಲಿ ಸಿಲುಕಿದ್ದ ಜನರನ್ನು ಕರೆದುಕೊಂಡುಬಂದೆವು” ಎಂದು ಮುಹಮ್ಮದ್ ಹೇಳುತ್ತಾರೆ.

ನಿಮ್ಮಿ ಈಗ ಕಾನೂನು ಹೋರಾಟ ನಡೆಸುತ್ತಿದ್ದಾರೆ. “ಪ್ರತಿನಿತ್ಯ ಗಲಭೆ ಆರೋಪಿಗಳ ಬಿಡುಗಡೆ ಸುದ್ದಿಗಳು ಕೇಳಿಬರುತ್ತಿವೆ. ಈಗ ಏನೂ ನಡೆಯಲಾರದೆಂದು ಹಲವರು ನನ್ನಲ್ಲಿ ಹೇಳಿದ್ದಾರೆ. ಯಾರಿಗೂ ಸಜೆಯಾಗುವುದಿಲ್ಲ. ಬಹಾವಡಿಯಲ್ಲಿ ನನ್ನ 200 ಗಜ ವಿಶಾಲ ಮನೆಯ ಬೆಲೆ 30000 ರೂಪಾಯಿ. ಇಲ್ಲಿ ನಗರದಲ್ಲಿ ಒಂದು ಗಜ ಜಮೀನಿನ ಬೆಲೆ 30 ಸಾವಿರ ರೂಪಾಯಿಗಿಂತ ಕಡಿಮೆಯಿಲ್ಲ. ನಮ್ಮ ಮನೆ ಹಾಳಾಗಿದೆ. ನಾನು ವಿಧವೆಯಾದೆ. ನನಗೆ ನನ್ನ ಮಗಳ ನೆನಪು ಬರುತ್ತಿದೆ. ನಾನು ಮಕ್ಕಳ ಮುಂದೆ ಕಣ್ಣೀರು ಹಾಕುವುದಿಲ್ಲ. ಪತಿಯ ಮರಣದ ಬಳಿಕ ನನ್ನ ತಂದೆ ನನ್ನನ್ನು ನೋಡಿಕೊಂಡರು. ಇಲ್ಲದಿದ್ದರೆ ನಾನು ಇರುತ್ತಿರಲಿಲ್ಲ. ನನಗೆ ನ್ಯಾಯದ ಯಾವ ಭರವಸೆಯೂ ಇಲ್ಲ. ಎಲ್ಲವೂ ತಲೆಯಲ್ಲಿ ಬರೆದಿರುವುದು” ಎಂದು ನಿಮ್ಮಿ ನಿರಾಶೆಯಿಂದ ಹೇಳುತ್ತಾರೆ.

ಮುಝಫ್ಫರ್ ನಗರ ಗಲಭೆಯ 7 ವರ್ಷದ ಬಳಿಕ ಹೆಚ್ಚಿನ ಆರೋಪಿಗಳನ್ನು ನ್ಯಾಯಾಲಯ ಬಿಡುಗಡೆಗೊಳಿಸಿದೆ. ಗಲಭೆಗೆ ಸಂಬಂಧಿಸಿದಂತೆ ಜೈಲಿಗೆ ಹೋದವರ ಜೀವನ ಸಂಪೂರ್ಣ ಬದಲಾಗಿದೆ. ನಿಮ್ಮಿಯಂತಹ 25 ಕ್ಕೂ ಅಧಿಕ ವಿಧವೆಯರ ಕತೆಗಳು ನೋವಿನಿಂದ ಕೂಡಿರುವಂತದ್ದು. ಗಲಭೆಯಲ್ಲಿ ಮಹಿಳೆಯರು ಸಂಕಷ್ಟಕ್ಕೀಡಾದ ನಿದರ್ಶನಗಳಲ್ಲಿ ಇದು ಒಂದು ಮಾತ್ರ. ಸಣ್ಣ ವಯಸಿನ ವಿಧವೆಯರು ಮರುವಿವಾಹವಾಗಿದ್ದಾರೆ. ಅದು ಸಾಧ್ಯವಾಗದವರು ತಮ್ಮ ಜೀವನವನ್ನು ತಮ್ಮ ಮಕ್ಕಳಿಗಾಗಿ ಅರ್ಪಿಸಿದ್ದಾರೆ. ಮುಝಫ್ಫರ್ ನಗರ ಗಲಭೆ ನಿನ್ನೆಯೂ ಒಂದು ದುರಂತವಾಗಿತ್ತು. ಇಂದೂ ಒಂದು ದುರಂತವಾಗಿದೆ. 7 ವರ್ಷಗಳ ಬಳಿಕವೂ ಜಾಟರು ಮತ್ತು ಮುಸ್ಲಿಮರನ್ನು ಹತ್ತಿರಗೊಳಿಸುವ ಹಲವು ಪ್ರಯತ್ನಗಳು ನಡೆದರೂ ಯಶಸ್ವಿಯಾಗಿಲ್ಲ.



Join Whatsapp