ಶಿವಮೊಗ್ಗ ಜಿಲ್ಲೆಗೆ ​30 ದಿನ ಪ್ರವೇಶಿಸದಂತೆ ಮುತಾಲಿಕ್​ ಗೆ ನಿರ್ಬಂಧ

Prasthutha|

ಶಿವಮೊಗ್ಗ: ಅಕ್ಟೋಬರ್ 17 ರಿಂದ ​30 ದಿನಗಳ ಕಾಲ ಶಿವಮೊಗ್ಗಕ್ಕೆ ಭೇಟಿ ನೀಡದಂತೆ ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

- Advertisement -

ಪ್ರಮೋದ್ ಮುತಾಲಿಕ್​ ಅ.17ರ ರಾತ್ರಿ ಮಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ್ಟಿದ್ದರು. ಆದರೆ ದಾರಿ ಮಧ್ಯೆ ಪೊಲೀಸರು ತಡೆದು ನೋಟಿಸ್ ನೀಡಿದರು.

ಇತ್ತೀಚೆಗೆ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ನಡೆದಿತ್ತು. ಹಾನಿಗೊಳಗಾದವರಿಗೆ ಸಾಂತ್ವನ ಹೇಳಲು ಇಂದು ಮುತಾಲಿಕ್ ಅವರು ರಾಗಿಗುಡ್ಡ ಬಡಾವಣೆಗೆ ಭೇಟಿಗೆ ಮುಂದಾಗಿದ್ದರು.

- Advertisement -

ರಾಗಿಗುಡ್ಡದಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಇದರಿಂದಾಗಿ ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಪ್ರಮೋದ್ ಮುತಾಲಿಕ್ ಅವರಿಗೆ ಶಿವಮೊಗ್ಗ ಪ್ರವೇಶ ನೀಡದಂತೆ ನಿಷೇಧ ಹೇರಬೇಕು ಎಂದು ಪೊಲೀಸ್ ಅಧೀಕ್ಷಕರು ಜಿಲ್ಲಾಡಳಿತಕ್ಕೆ ಕೋರಿದ್ದರು. ಪೊಲೀಸ್ ಅಧೀಕ್ಷಕರ ಮನವಿ ಮೇರೆಗೆ ಶಿವಮೊಗ್ಗ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ ಅವರು ಆದೇಶ ಹೊರಡಿಸಿದ್ದು, ಇಂದಿನಿಂದ ಮುಂದಿನ 30 ದಿನಗಳವರೆಗೆ ಜಿಲ್ಲೆಗೆ ಪ್ರವೇಶ ಮಾಡದಂತೆ ಸೂಚಿಸಿದ್ದಾರೆ.

ಈ ಕುರಿತು ಮಾತನಾಡಿದ ಪ್ರಮೋದ ಮುತಾಲಿಕ್,​ ಇತ್ತೀಚೆಗೆ ಗಲಾಟೆ ನಡೆದ ಶಿವಮೊಗ್ಗದ ರಾಗಿಗುಡ್ಡ ಭೇಟಿ ನೀಡಲು ಮಂಗಳೂರಿನಿಂದ ಹೊರಟ್ಟಿದ್ದೆ. ಆದರೆ ಪೊಲೀಸರು ಮಾಸ್ತಿಕಟ್ಟೆ ಬಳಿ ತಡೆದು, ನನ್ನನ್ನು ವಶಕ್ಕೆ ಪಡೆದುಕೊಂಡು ದಾವಣಗೆರೆಗೆ ತಂದು ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ನನ್ನ ಭೇಟಿಗೆ ನಿರ್ಬಂಧ ವಿಧಿಸಿರುವ ಬಗ್ಗೆ ಕೋರ್ಟ್​ ಮೊರೆ ಹೋಗುತ್ತೇನೆ. ರಾಗಿಗುಡ್ಡದ ಸಂತ್ರಸ್ತ ಹಿಂದುಗಳಿಗೆ ಸಾಂತ್ವನ ಹೇಳುವುದು ನನ್ನ ಉದ್ದೇಶ. ಆದರೆ ನನ್ನನ್ನು ತಡೆದು ಪೊಲೀಸರು ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.