ಮಡಿಕೇರಿ: ಹೈಕೋರ್ಟಿನ ಮಧ್ಯಂತರ ಆದೇಶದ ದುರ್ಬಳಕೆ ಮತ್ತು ಬಲವಂತದ ಅನುಷ್ಠಾನಗೊಳಿಸುತ್ತಿರುವುದರ ವಿರುದ್ಧ ಕೊಡಗು ಮುಸ್ಲಿಂ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ರಿಟ್ ಅರ್ಜಿಗೆ ಸಂಬಂಧಿಸಿ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ತಪ್ಪಾಗಿ ಅರ್ಥೈಸಿಕೊಂಡಿವೆ. ಕರ್ನಾಟಕ ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಈ ಕೆಳಗಿನಂತೆ ಸ್ಪಷ್ಟವಾಗಿ ಹೇಳಿದೆ. “ ಈ ಎಲ್ಲಾ ಅರ್ಜಿಗಳ ಬಾಕಿ ಉಳಿದಿರುವ ವಿಚಾರಣೆಯನ್ನು ಪರಿಗಣಿಸಿಕೊಂಡು, ವಿದ್ಯಾರ್ಥಿಗಳು ಯಾವುದೇ ಧರ್ಮ ಅಥವಾ ನಂಬಿಕೆಯನ್ನು ಅನುಸರಿಸುವವರಾಗಿದ್ದರೂ, ಕೇಸರಿ ಶಾಲು ( ಭಗವಾ ), ಸ್ಕಾರ್ಫ್ಗಳು, ಹಿಜಾಬ್, ಧಾರ್ಮಿಕ ಧ್ವಜಗಳು ಅಥವಾ ತರಗತಿಯೊಳಗೆ ಧರಿಸುವುದನ್ನು ಮುಂದಿನ ಆದೇಶದ ವರೆಗೆ ನಾವು ನಿಬಂಧಿಸುತ್ತೇವೆ”.
“ಕಾಲೇಜು ಅಭಿವೃದ್ಧಿ ಸಮಿತಿಗಳ ಮೂಲಕ ವಿದ್ಯಾರ್ಥಿಗಳ ವಸ್ತ್ರ ಸಂಹಿತೆ ಸಮವಸ್ತ್ರವನ್ನು ನಿರ್ಧರಿಸಿರುವ ಸಂಸ್ಥೆಗಳಿಗೆ ಮಾತ್ರವೇ ಈ ಆದೇಶ ಅನ್ವಯಿಸುತ್ತದೆ ಎಂಬುದನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ”.
ಮೇಲೆ ತಿಳಿಸಲಾದ ಮಧ್ಯಂತರ ಆದೇಶದ ಅಂಶವು ರಾಜ್ಯ ಸರಕಾರದ ಅನುಷ್ಠಾನಗೊಳಿಸಲು ಆದೇಶ ಅಥವಾ ನಿರ್ದೇಶನ ನೀಡಿರುವುದಿಲ್ಲ. ಆದೇಶವು ವಿಶೇಷವಾಗಿ ವಿದ್ಯಾರ್ಥಿಗಳ ವಸ್ತ್ರ ಸಂಹಿತೆ / ಸಮವಸ್ತ್ರವನ್ನು ಗೊತ್ತುಪಡಿಸಿರುವ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಮೇಲೆ ಹೇಳಲಾದ ಅದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಶಿಕ್ಷಣ ಇಲಾಖೆಯು ಇದನ್ನು ಖಾಸಗಿ ಶಾಲೆಗಳು ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ತಪ್ಪಾಗಿ ಅನುಷ್ಠಾನಗೊಳಿಸುತ್ತಿದೆ. ಈಗಾಗಲೇ ಕಾಲೇಜು ಅಭಿವೃದ್ಧಿ ಸಮಿತಿಗಳ ಮೂಲಕ ತನ್ನ ವಿದ್ಯಾರ್ಥಿಗಳಿಗೆ ಸವಸ್ತ್ರವನ್ನು ಗೊತ್ತುಪಡಿಸಿರುವ ಸಂಸ್ಥೆಗಳಿಗೆ ಮಾತ್ರ ಈ ಆದೇಶವು ನಿರ್ದೇಶನ ನೀಡುತ್ತದೆ.
ಈ ಆದೇಶದ ನೆಪದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ಎಲ್ಲೆಡೆಯೂ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಕೂಡ ತಮ್ಮ ಸಮವಸ್ತ್ರದಲ್ಲಿಯೇ ಶಾಲೆಗಳಿಗೆ ಭೇಟಿ ನೀಡಿ ಸಂವಿಧಾನಿಕ ಹಕ್ಕುಗಳಿಗೆ ವಿರುದ್ಧವಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ತಮ್ಮ ಹಿಜಾಬ್ ಕಳಚುವಂತೆ ನಿರ್ದೇಶನ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ ಮತ್ತು ಈ ವಿಚಾರ ಗೌರವಾನ್ವಿತ ಕರ್ನಾಟಕ ಹೈಕೋರ್ಟ್ನ ಮುಂದೆ ವಿಚಾರಣೆಯಲ್ಲಿರುವಾಗಲೇ ಇಂತಹ ಕ್ರಮ ನಡೆದಿರುವುದು ಗಮನಾರ್ಹವಾಗಿದೆ. ಕರ್ನಾಟಕದ ಉನ್ನತ ಶಿಕ್ಷಣ ಸಚಿವರಾದಂತಹ ಅಶ್ವತ್ಥ ನಾರಾಯಣ್ರವರು ಪದವಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಲ್ಲ, ವಿಧ್ಯಾರ್ಥಿಗಳು ತಮಗಿಷ್ಟ ಬಂದಂತಹ ಉಡುಪನ್ನು ಧರಿಸಬಹುದು ಎಂದು ಹೇಳಿಕೆ ನೀಡಿದ್ದರೂ ಸಹ ಮಡಿಕೇರಿಯ ಎಫ್.ಎಂ.ಸಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಸಮವಸ್ತ್ರ ಧರಿಸಬೇಕೆಂದು ಒತ್ತಾಯಪಡಿಸುತ್ತಿರುವುದು ವಿಷಾದದ ಹಾಗೂ ಕಾನೂನು ಬಾಹಿರ ವಿಷಯವಾಗಿದೆ. ಆದುದರಿಂದ, ಸಂಬಂಧಿತ ಅಧಿಕಾರಿಗಳಿಗೆ ತಿಳಿಹೇಳುವಂತೆ ಮತ್ತು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಹಿಜಾಬ್ ಅನ್ನು ಬಲವಂತವಾಗಿ ಕಳಚಲು ಅನಿವಾರ್ಯಪಡಿಸದಂತೆ ಪ್ರೌಡ ಶಾಲೆ ಮತ್ತು ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕೆಂದು ಮನವಿ ಪತ್ರ ಮಾಡಿದರು.
ನಿಯೋಗದಲ್ಲಿ ಪ್ರಮುಖರಾದ
ಅಮೀನ್ ಮೊಹಿಸಿನ್, ಹಮೀದ್ ಮೌಲವಿ, ಉಮ್ಮರ್ ಫೈಝಿ, ಹಾರೂನ್ ಎಂ.ಎಂ., ಹಂಸ ಕೊಟ್ಟಮುಡಿ, ಇಸಾಕ್ ಖಾನ್, ಖಾಲಿದ್, ಮನ್ಸೂರ್, ಬಶೀರ್, ರಫೀಕ್, ಉಸ್ಮಾನ್, ನಿಯಾಝ್, ಉಸ್ಮಾನ್, ಶಬ್ಬೀರ್, ನಝೀರ್, ಇಬ್ರಾಹಿಂ, ಸಂಶೀರ್, ಅಸ್ಕರ್, ನವಾಸ್, ಸಲೀಂ ಮತ್ತಿತರರು ಇದ್ದರು.