ದಾವಣಗೆರೆಯಲ್ಲಿ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ

Prasthutha|

►ಸಾಮರಸ್ಯದ ಸಮಾಜವನ್ನು ಕಟ್ಟುವ ಶಕ್ತಿ ಸಾಹಿತ್ಯಕ್ಕಿದೆ – ಯು.ಟಿ. ಖಾದರ್

- Advertisement -

ದಾವಣಗೆರೆ:  ಸಾಮರಸ್ಯದ ಸಮಾಜವನ್ನು ಕಟ್ಟುವ ಶಕ್ತಿ ಕನ್ನಡ ಸಾಹಿತ್ಯಕ್ಕಿದೆ. ಇದನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಿಧಾನ ಸಭೆಯ ಪ್ರತಿಪಕ್ಷ ಉಪನಾಯಕ, ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ದಾವಣಗೆರೆಯ ರೋಟರಿ ಬಾಲ ಭವನದಲ್ಲಿ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜ್ಯ ಮಟ್ಟದ ಮರ್ಹೂಮ್ ಯು.ಟಿ. ಫರೀದ್ ಸ್ಮರಣಾರ್ಥ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು  ಇಂದು ಸಮಾಜದಲ್ಲಿ ಸಾಹಿತ್ಯ ಕೃತಿಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಯುವಜನರು ಮತ್ತು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸುವ ಜವಾಬ್ದಾರಿ ಪಾಲಕರಿಗಿದೆ. ಸಾಹಿತ್ಯಿಕ ಕಾರ್ಯಕ್ರಮಗಳು, ಗ್ರಂಥಾಲಯ ಮತ್ತು ಪುಸ್ತಕ ಮಳಿಗೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಮೂಲಕ ಮಕ್ಕಳಲ್ಲಿ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸಬೇಕೆಂದು ಹೇಳಿದರು.

- Advertisement -

ಕವಿ, ಅಧ್ಯಾಪಕ ಸಂತೆಬೆನ್ನೂರು ಫೈಜ್ನಟ್ರಾಜ್’ರವರು ತಮ್ಮ ಕೃತಿ ‘ಕೇಳದೆ ನಿಮಗೀಗ’ಕ್ಕೆ 2020ನೇ ಸಾಲಿನ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್, ನ್ಯಾಯವಾದಿ  ಅನೀಶ್ ಪಾಷಾ, ಮುಸ್ಲಿಮ್ ಮುಖಂಡ ದಾದಾ ಫೀರ್ ಶೇಠ್, ಜಮಾಅತೆ ಇಸ್ಲಾಮೀ ಹಿಂದ್ ದಾವಣಗೆರೆ ಘಟಕದ ಅಧ್ಯಕ್ಷ ಅಯ್ಯುಬ್ ಖಾನ್, ಮಿಲ್ಲತ್ ಅಸೋಸಿಯೇಶನ್ ನ ಅಧ್ಯಕ್ಷ ಸೆಯ್ಯದ್ ಸೈಫುಲ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಂತರ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಕಲೀಮ್ ಪಾಷಾ ಜೆ. (ಕನ್ನಡ), ಡಾ. ಹಸೀನಾ ಖಾದ್ರಿ (ಕನ್ನಡ), ಡಾ. ದಾವೂದ್ ಮುಹ್ಸಿನ್ (ಉರ್ದು), ಗೋವರ್ಧನ ಗಿರಿಶಾಂ (ಕನ್ನಡ), ಗೌಸ್ ಫೀರ್ ಹಮ್ದರ್ದ್ (ಉರ್ದು), ಸಿರಾಜ್ ರೆಹಮಾನಿ (ಉರ್ದು), ಸನಾವುಲ್ಲಾ ನವಿಲೇಹಾಳ್ (ಕನ್ನಡ) ಹಾಗೂ ಸಂತೆಬೆನ್ನೂರು ಫೈಜ್ನಾಟ್ರಾಜ್ (ಕನ್ನಡ) ಕವನಗಳನ್ನು ಮಂಡಿಸಿದರು. ಸಮಾರಂಭದಲ್ಲಿ ನೆರಳು ಬೀಡಿ ಕಾರ್ಮಿಕರ ಯೂನಿಯನ್’ನ ಅಧ್ಯಕ್ಷೆ ಜಬೀನಾ ಖಾನಂ, ಅಧ್ಯಾಪಕಿ ಸಾಹಿರಾ ಬಾನು ಚೆಳ್ಳಕೆರೆ ಹಾಗೂ ಸಾಮಾಜಿಕ ಕಾರ್ಯಕರ್ತ ನಿಝಾಮುದ್ದೀನ್ ರನ್ನುಅಭಿನಂದಿಸಲಾಯಿತು.

ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎ.ಕೆ. ಕುಕ್ಕಿಲ ಪ್ರಸ್ತಾಪಿಸಿ, ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಯಾಕೂಬ್ ಕಲ್ಲರ್ಪೆ ಕಿರಾಅತ್ ಪಠಿಸಿದರು. ಉಪಾಧ್ಯಕ್ಷ ಆಲಿ ಕುಂಞಿ ಪಾರೆ ಧನ್ಯವಾದವಿತ್ತರು. ಪ್ರಧಾನ ಕಾರ್ಯದರ್ಶಿ ಬಿ. ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಸಲೀಮ್ ಬೋಳಂಗಡಿ ಉಪಸ್ಥಿತರಿದ್ದರು.



Join Whatsapp