ಅಗರ್ತಲಾ: ನ್ಯಾಯಾಂಗ ಬಂಧನದಲ್ಲಿದ್ದ ಮುಸ್ಲಿಮ್ ವ್ಯಕ್ತಿಯೊಬ್ಬರ ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ತ್ರಿಪುರಾ ಹೈಕೋರ್ಟ್’ನ ತೀರ್ಪಿನ ವಿರುದ್ಧ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಮ್ ಕೋರ್ಟ್ ವಜಾಗೊಳಿಸಿದ್ದು, ಮೃತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ನೀಡುವಂತೆ ಆದೇಶ ನೀಡಿದೆ.
27 ವರ್ಷದ ಮುಸ್ಲಿಮ್ ಯುವಕ ಜಮಾಲ್ ಹುಸೈನ್ ಎಂಬಾತನನ್ನು ಸರ್ಕಾರ, ಪೊಲೀಸ್ ಠಾಣೆಯೊಳಗೆ ಹತ್ಯೆ ಮಾಡಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಮ್ ಕೋರ್ಟ್ ಮೃತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು.
2021ರ ಸೆಪ್ಟೆಂಬರ್ 14ರಂದು ಸೋನಮುರಾ ಪೊಲೀಸ್ ಠಾಣೆಯಲ್ಲಿ ಹುಸೈನ್ ಎಂಬಾತನನ್ನು ಪೊಲೀಸರು ಹೊಡೆದು ಹತ್ಯೆ ನಡೆಸಿದ್ದರು. ಅಲ್ಲದೆ ಹುಸೈನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಪೊಲೀಸ್ ಅಧಿಕಾರಿಗಳು ಕಟ್ಟುಕಥೆ ಸೃಷ್ಟಿಸಿದ್ದರು.
ಹುಸೈನ್ ಸಾವಿನ ಬಳಿಕ ಮೃತನ ಪತ್ನಿ, ತಾಯಿ ಮತ್ತು ಮೃತನ ಅಪ್ರಾಪ್ತ ಮಕ್ಕಳು ತ್ರಿಪುರಾ ಹೈಕೋರ್ಟ್’ಗೆ ಮೃತ ಹುಸೈನ್ ಅವರಿಗೆ ನ್ಯಾಯ ಮತ್ತು ಪರಿಹಾರ ಮೊತ್ತಕ್ಕಾಗಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ತ್ರಿಪುರಾ ಹೈಕೋರ್ಟ್’ನ ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮೆಹಂತಿ ಮತ್ತು ನ್ಯಾಯಮೂರ್ತಿ ಎಸ್.ಜಿ ಚಟ್ಟೋಪಾಧ್ಯಾಯ ಅವರನ್ನೊಳಗೊಂಡ ಪೀಠ, ಜಮಾಲ್ ಹುಸೈನ್ ಅವರ ಸಾವು ಹಿಂಸಾಚಾರದಿಂದಾಗಿ ಸಂಭವಿಸಿದೆ ಮತ್ತು ಅವರ ಹತ್ಯೆ ಹೊಣೆಯನ್ನು ರಾಜ್ಯ ಸರ್ಕಾರ ತಪ್ಪಿಸಲು ಸಾಧ್ಯವಿಲ್ಲ ಎಂದು ಆದೇಶ ನೀಡಿತ್ತು.
ಈ ನಿಟ್ಟಿನಲ್ಲಿ ನಾಲ್ಕು ವಾರಗಳಲ್ಲಿ ಮೃತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಇದರ ವಿರುದ್ಧ ತ್ರಿಪುರಾ ಸರ್ಕಾರ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿತ್ತು.
27 ವರ್ಷದ ಜಮಾಲ್ ಹುಸೈನ್ ದುಬೈನಲ್ಲಿ ಕೆಲಸ ನಿರ್ವಹಿಸುತ್ತಿದ್ದು, 2021ರ ಸೆಪ್ಟೆಂಬರ್’ನಲ್ಲಿ ರಜೆಯ ನಿಮಿತ್ತ ಊರಿಗೆ ಬಂದಿದ್ದರು. ಈ ಮಧ್ಯೆ ಸೆಪ್ಟೆಂಬರ್ 14, 2021ರಂದು ರಾತ್ರಿ 11.30ಕ್ಕೆ ಪೊಲೀಸ್ ಸಿಬ್ಬಂದಿಯ ತಂಡವೊಂದು ಹುಸೈನ್ ಅವರ ಮನೆಗೆ ಬಂದು ಆತನಿಗೆ ಹಲ್ಲೆ ಮಾಡಲು ಶುರು ಮಾಡಿತ್ತು. ಆ ಬಳಿಕ ಅವರನ್ನು ಪೊಲೀಸರು ಠಾಣೆಗೆ ಕರೆದೊಯ್ದರು. ಮರುದಿನ ಬೆಳಗ್ಗೆ ಲಾಕಪ್’ನಲ್ಲಿ ಜಮಾಲ್ ಅವರು ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಕುಟುಂಬಸ್ಥರಿಗೆ ತಿಳಿಸಿದ್ದರು.