ದನದ ಮಾಂಸ ಸಾಗಿಸುತ್ತಿದ್ದಾರೆಂದು ಆರೋಪಿಸಿ ಮುಸ್ಲಿಂ ವ್ಯಕ್ತಿಯ ಗುಂಪು ಹತ್ಯೆ

Prasthutha|

ಪಾಟ್ನ: ದನದ ಮಾಂಸ ಸಾಗಿಸುತ್ತಿದ್ದಾನೆ ಎಂದು ಆರೋಪಿಸಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಹಿಂದುತ್ವ ಗುಂಪು ತೀವ್ರವಾಗಿ ಥಳಿಸಿ, ಹತ್ಯೆಗೈದಿರುವ ದಾರುಣ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ.

- Advertisement -


ಸರನ್ ಜಿಲ್ಲೆಯ ನೆರೆ ಜಿಲ್ಲೆಯಾದ ಸಿವಾನ್ ಜಿಲ್ಲೆಯ ಹಸನ್’ಪುರ ಗ್ರಾಮದ ನಿವಾಸಿ ನಸೀಂ ಖುರೇಶಿ (56) ಹತ್ಯೆಯಾದವರು. ಸೋದರಳಿಯ ಫಿರೋಝ್ ಅಹ್ಮದ್ ಖುರೇಶಿ ಜೊತೆಗೆ ತಮ್ಮ ಪರಿಚಯದವರನ್ನು ಭೇಟಿಯಾಗಲು ಸರನ್ ಜಿಲ್ಲೆಗೆ ಹೋಗಿದ್ದಾಗ ಸಂಘಪರಿವಾರದ ಕಾರ್ಯಕರ್ತರು ರಾಜಧಾನಿ ಪಾಟ್ನಾದಿಂದ 110 ಕಿಲೋಮೀಟರ್ ವಾಯವ್ಯಕ್ಕಿರುವ ಜೋಗಿಯಾ ಗ್ರಾಮದಲ್ಲಿ ಅವರ ಮೇಲೆ ದಾಳಿ ಮಾಡಿ ಮಾರಣಾಂತಿಕವಾಗಿ ಥಳಿಸಿದ್ದಾರೆ.


ಹತ್ಯೆ ಸಂಬಂಧ ಸ್ಥಳೀಯ ಸರಪಂಚ ಸುಶೀಲ್ ಸಿಂಗ್ ಮತ್ತು ರವಿ ಶಾ ಮತ್ತು ಉಜ್ವಲ್ ಶರ್ಮಾ ಎಂಬ ಮೂವರನ್ನು ಬಂಧಿಸಲಾಗಿದೆ. ಫೆಬ್ರವರಿ 23ರಂದು ಗಯಾ ಜಿಲ್ಲೆಯಲ್ಲಿ ಇದೇ ರೀತಿಯ ಬರ್ಬರ ಹತ್ಯೆ ನಡೆದಿತ್ತು. ಭಾರತೀಯ ದಂಡ ಸಂಹಿತೆಯ 302 ಕೊಲೆ, 34 ಗುಂಪು ಕೂಡಿ ಹಲ್ಲೆ, 379 ಕಳವು ದರೋಡೆ ವಿಧಿಗಳಡಿ ಮೊಕದ್ದಮೆ ದಾಖಲಿಸಿದ್ದಾರೆ. ಪೊಲೀಸರು ಕೊಲೆಗಾರರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ನಸೀಂ ಖುರೇಶಿ ಕುಟುಂಬದವರು ಆರೋಪ ಮಾಡಿದ್ದಾರೆ.

- Advertisement -


“ಗುಂಪು ಸೇರಿ ಹತ್ಯೆ ಪ್ರಕರಣವಾಗಿ ನಾವು ಇದನ್ನು ಪರಿಗಣಿಸಿದ್ದೇವೆ. ಸರಪಂಚ ಸೇರಿ ಬಂಧಿಸಿದ ಮೂವರ ವಿರುದ್ಧ ಎಫ್’ಐಆರ್ ದಾಖಲಾಗಿದೆ. ಹಲ್ಲೆ ನಡೆದಾಗ ನಸೀಂ ಬೀಫ್ ಒಯ್ಯುತ್ತಿದ್ದರೆ ಇಲ್ಲವೇ ಎನ್ನುವುದು ತನಿಖೆಯಿಂದ ತಿಳಿಯಬೇಕಾಗಿದೆ.” ಎಂದು ಸರನ್ ಎಸ್. ಪಿ. ಗೌರವ್ ಮಂಗ್ಲಾ ಮಾಧ್ಯಮದವರಿಗೆ ಹೇಳಿದ್ದಾರೆ.


ನಾವು ಜೋಗ್ರಾ ಗ್ರಾಮಕ್ಕೆ ಹೋದಾಗ ಸರಪಂಚ ಮತ್ತಿತರರು ನನ್ನನ್ನು ಮತ್ತು ಮಾವನನ್ನು ತಡೆದರು ಎಂದು ಫಿರೋಝ್ ಹೇಳಿದರು.
“ಅವರು ನಮ್ಮ ಮೋಪೆಡನ್ನು ತಡೆದರು. ಸರಪಂಚ ದನದ ಮಾಂಸ ಒಯ್ಯುತ್ತಿದ್ದೀರಿ ಎಂದು ಆರೋಪ ಮಾಡಿದರು ಮತ್ತು ತಮ್ಮವರಿಗೆ ನಮ್ಮನ್ನು ಥಳಿಸಲು ತಿಳಿಸಿದರು. ನಾನು ತಪ್ಪಿಸಿಕೊಂಡೆ, ಅವರು ನನ್ನನ್ನು ಬೆನ್ನಟ್ಟಿ ಬಂದರು.” ಎಂದು ಫೀರೋಝ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಆದರೆ ನಸೀಂರನ್ನು ಹಿಡಿದು ನಿರ್ದಾಕ್ಷಿಣ್ಯವಾಗಿ ಬಡಿದು ಕೊಂದಿದ್ದಾರೆ. ಹಿಂದಿರುಗಿ ನೋಡಿದಾಗ ಮಾವನನ್ನು ಇನ್ನೂ ಹೊಡೆಯುತ್ತಿದ್ದರು, ನಾನು ಆಗ ಸ್ಥಳೀಯ ರಸೂಲ್’ಪುರ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿದೆ.


“ನಾನು ಪೊಲೀಸರಿಗೆ ವಿಷಯ ತಿಳಿಸಿ ಹೊರ ನಡೆದೆ. ಸ್ವಲ್ಪ ಸಮಯದ ಬಳಿಕ ಒಂದು ಪೊಲೀಸ್ ವಾಹನವು ನಮ್ಮ ಮಾವನನ್ನು ಸಾಗಿಸಿದ್ದನ್ನು ನೋಡಿದೆ. ಮತ್ತೆ ನಾನು ಪೊಲೀಸ್ ಠಾಣೆಗೆ ಹೋಗಿ ನೋಡಿದಾಗ ಮಾವ ಅಲ್ಲಿರಲಿಲ್ಲ. ಅಲ್ಲಿ ಜನರ ಗುಂಪು ಇತ್ತು. ರಸೂಲ್’ಪುರ ಪಂಚಾಯತಿ ಮುಖ್ಯಸ್ಥ ಎನ್ನುವವರೂ ಅಲ್ಲಿದ್ದರು. ನಿಮ್ಮ ಮಾವನಿಗೆ ಹುಶಾರಿಲ್ಲವಾದ್ದರಿಂದ ಸಿವಾನ್’ನ ದರೌಂದಾಕ್ಕೆ ಸಾಗಿಸಲಾಗಿದೆ ಎಂದು ತಿಳಿಸಿದರು” ಎಂದು ಫಿರೋಝ್ ಹೇಳಿದರು.

ನಸೀಂರನ್ನು ಸಿವಾನ್ ಸರಕಾರಿ ಆಸ್ಪತ್ರೆಯಿಂದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಪಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಆದರೆ ಪಾಟ್ನಾಕ್ಕೆ ಒಯ್ಯುವುದಕ್ಕೆ ಮೊದಲೇ ನಸೀಂ ಪ್ರಾಣ ಪಕ್ಷಿ ಒಂದೇ ರಾತ್ರಿಯಲ್ಲಿ ಹಾರಿ ಹೋಗಿತ್ತು.


ಶವಪರೀಕ್ಷೆಗಾಗಿ ನಸೀಂರ ದೇಹವನ್ನು ಛಾಪ್ರಾ ಸರಕಾರಿ ಆಸ್ಪತ್ರೆಗೆ ಸಾಗಿಸಿದರು. ಆಮೇಲೆ ಹಸನ್’ಪುರದ ಸಂಬಂಧಿಕರಿಗೆ ದೇಹ ಒಪ್ಪಿಸಲಾಗಿದೆ.
“ಸ್ಥಳೀಯ ಪೊಲೀಸರು ಅಪರಾಧಿಗಳನ್ನು ರಕ್ಷಿಸಲು ನೋಡುತ್ತಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನನ್ನ ಸಹೋದರನನ್ನು ಆಂಬುಲೆನ್ಸ್’ನಲ್ಲಿ ಒಯ್ಯದೆ ಪೊಲೀಸರು ಒಂದು ಮೋಟಾರು ಸೈಕಲ್’ನಲ್ಲಿ ಕರೆದುಕೊಂಡು ಹೋಗಿದ್ದಾರೆ” ಎಂದು ನಸೀಂರ ಸಹೋದರ ಅಶ್ರಫ್ ಖುರೇಶಿ ದೂರಿದ್ದಾರೆ.
ಸರನ್’ನ ಸೂಪರಿನ್ ಟೆಂಡೆಂಟ್ ಆಫ್ ಪೊಲೀಸ್ ನ್ಯಾಯವಾದ ರೀತಿಯಲ್ಲಿ ತನಿಖೆ ನಡೆಸಬೇಕು. ಈ ರೀತಿಯ ಘಟನೆಗಳು ಇನ್ನೊಮ್ಮೆ ನಡೆಯಬಾರದು ಎಂದು ಮಾಜಿ ಸೈನಿಕರೂ ಆಗಿರುವ ಅಶ್ರಫ್ ಒತ್ತಾಯಿಸಿದ್ದಾರೆ.



Join Whatsapp