ಬಂಟ್ವಾಳ: ತಾಲೂಕಿನ ಮೂಲರಪಟ್ನ ನಿವಾಸಿಯೊಬ್ಬರ ಮೇಲೆ ಸುಳ್ಳು ಆರೋಪ ಮಾಡಿ ಬಸ್ ಕಂಡೆಕ್ಟರ್ ಮತ್ತು ಕೆಲವು ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಘಟನೆಯನ್ನು ಎಸ್ ಡಿ ಪಿ ಐ ತೀವ್ರವಾಗಿ ಖಂಡಿಸುತ್ತಿದೆ ಎಂದು ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮೂನಿಷ್ ಆಲಿ ತಿಳಿಸಿದ್ದಾರೆ.
ಸಂಘಪರಿವಾರಕ್ಕೆ ಇಲ್ಲಿನ ಒಂದು ಸಮುದಾಯವನ್ನು ಗುರಿಪಡಿಸಿ ಈ ರೀತಿಯ ಅನೈತಿಕ ಪೊಲೀಸ್ ಗಿರಿ ಮತ್ತು ಹಲ್ಲೆಗಳು ನಡೆಸುವುದು ಚಾಳಿಯಾಗಿ ಬಿಟ್ಟಿದೆ. ದ.ಕ ಜಿಲ್ಲೆಯಲ್ಲಿ ಕಾಣಿಯೂರು, ಅಡ್ಡೂರು ಎಂಬಲ್ಲಿ ಈ ಹಿಂದೆ ಇಂತಹ ಘಟನೆಗಳು ನಡೆದಿದ್ದು, ಈಗ ರಾಯಿಯಲ್ಲೂ ಇಂತಹ ಹಲ್ಲೆ ಕೃತ್ಯಗಳು ಮರುಕಳಿಸಿವೆ. ಇಂತಹವುಗಳಿಗೆ ಜಿಲ್ಲೆಯ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಪ್ರಸ್ತುತ ಘಟನೆಯನ್ನು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿ, ಹಲ್ಲೆ ಮಾಡಿದ ಮತ್ತು ಮಾಡಿಸಿದ ಪ್ರತಿಯೊಬ್ಬರನ್ನೂ ಗುರುತು ಹಚ್ಚಿ, ಸುಮೋಟೋ ಪ್ರಕರಣವನ್ನು ದಾಖಲಿಸುವ ಮೂಲಕ ಕಠಿಣ ಶಿಕ್ಷೆಗೊಳಪಡಿಸಬೇಕು. ಸಂತ್ರಸ್ತ ವ್ಯಕ್ತಿಯು ಬಡ ಕೂಲಿ ಕಾರ್ಮಿಕನಾಗಿದ್ದು, ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು. ಆದ್ದರಿಂದ ಸರಕಾರವು ಆಸ್ಪತ್ರೆ ವೆಚ್ಚ ಸೇರಿದಂತೆ ಪರಿಹಾರ ಧನವನ್ನು ಘೋಷಿಸಬೇಕು ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.