ಕೊಚ್ಚಿ: ಎಂಟು ವರ್ಷಗಳ ಹಿಂದಿನ ಲಂಚ ಸ್ವೀಕರಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ- ಇಡಿ- ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಕೆ. ಎಂ. ಶಾಜಿ ಅವರ ವಿಚಾರಣೆ ನಡೆಸಿದೆ.
2014ರಲ್ಲಿ ಅಳಿಕೋಡ್ ನ ಒಂದು ಅನುದಾನಿತ ಶಾಲೆಗೆ ಪಿಯು ತರಗತಿಗಳನ್ನು ಆರಂಭಿಸಲು ಅನುಮತಿ ನೀಡಲು 25 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಮನಿ ಲಾಂಡರಿಂಗ್ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಈ ಕೇಸಿಗೆ ಸಂಬಂಧಿಸಿದಂತೆ ಶಾಜಿಯವರನ್ನು ಎರಡನೆಯ ಬಾರಿ ಪ್ರಶ್ನಿಸಲಾಗುತ್ತಿದೆ. 2020ರ ನವೆಂಬರ್ ನಲ್ಲಿ ಅವರನ್ನು ಮೂರು ದಿನ ಪ್ರಶ್ನಿಸಲಾಗಿತ್ತು. ಅವರು ಅಳಿಕೋಡ್ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಐಯುಎಂಎಲ್ ನ ಸ್ಥಳೀಯ ನಾಯಕ ಪುತುಪ್ಪಾರ ನೌಶಾದ್ ಈ ಬಗ್ಗೆ ಧ್ವನಿ ಎತ್ತಿದಾಗ ಈ ಲಂಚದ ಪ್ರಕರಣ ಬಯಲಿಗೆ ಬಂದಿತ್ತು.
ಕೋಝಿಕ್ಕೋಡ್ ನಗರದಲ್ಲಿ ಶಾಜಿ ಕಟ್ಟಿಸಿರುವ 1.62 ಕೋಟಿ ವೆಚ್ಚದ ಮನೆಯ ಬಗ್ಗೆ ಶಾಜಿಯವರು ನೀಡಿರುವ ಎಲ್ಲ ದಾಖಲೆಗಳನ್ನು ಇಡಿ ಪರಿಶೀಲಿಸುತ್ತಿದೆ. ಅಲ್ಲದೆ ಶಾಜಿಯವರ ರಿಯಲ್ ಎಸ್ಟೇಟ್ ಬಿಜಿನೆಸ್, ಕಳೆದ 10 ವರುಷಗಳಿಂದ ಅವರ ಹಣದ ವಹಿವಾಟು ಎಲ್ಲವನ್ನೂ ಇಡಿ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.