ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಿ ಮೋದಿ ರದ್ದುಗೊಳಿಸಿದ ಬೆನ್ನಲ್ಲೇ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಹಿಂಪಡೆಯುವಂತೆ ಮುಸ್ಲಿಮ್ ಮುಖಂಡರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಿಎಎಯನ್ನು ಮುಖ್ಯವಾಗಿ ಮುಸ್ಲಿಮ್ ಸಮುದಾಯ ಸೇರಿದಂತೆ ಹಲವು ವರ್ಗಗಳು ವಿರೋಧಿಸುತ್ತಿವೆ. ಮಾತ್ರವಲ್ಲ ಈ ಕಾಯ್ದೆಯು ತಾರತಮ್ಯದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜಮಾಅತ್ ಇಸ್ಲಾಮ್ ಹಿಂದ್ ನ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೇನಿ, ಈಗ ಸಿಎಎ ಮತ್ತು ಎನ್.ಆರ್.ಸಿ ಸೇರಿದಂತೆ ಹಲವಾರು ಜನವಿರೋಧಿ ಮತ್ತು ಸಾಂವಿಧಾನಿಕ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೂರು ಕೃಷಿ ಕಾಯ್ದೆಗಳ ರದ್ದತಿ ನಿರ್ಧಾರವನ್ನು ಸ್ವಾಗತಿಸಿದ ಜಮಿಯತ್ ಉಲೆಮಾ ಎ ಹಿಂದ್ ನ ಮುಖ್ಯಸ್ಥ ಅರ್ಷದ್ ಮದನಿ, ಸಿಎಎ ಆಂದೋಲನವು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸಲು ರೈತರನ್ನು ಪ್ರಚೋದಿಸಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಲಿ. ಮಾತ್ರವಲ್ಲ ತ್ಯಾಗ ಬಲಿದಾನಗೈದ ರೈತರನ್ನು ಸರ್ಕಾರ ಅಭಿನಂಧಿಸಲಿ ಎಂದು ಒತ್ತಾಯಿಸಿದರು.
ಮಜ್ಲಿಸ್ ಇ ಮುಶಾವರತ್ ಅಧ್ಯಕ್ಷ ನವೈದ್ ಹಮೀದ್ ಮಾತನಾಡಿ, ಸಿಎಎ ಮತ್ತು ಯುಎಪಿಎ ಸೇರಿದಂತೆ ಎಲ್ಲಾ ಕಠಿಣ ಕಾನೂನು ಹಿಂಪಡೆಯಬೇಕು. ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆಯಲ್ಲಿ ಪರೋಕ್ಷವಾಗಿ ಭಾಗೀಯಾಗಿರುವ ಸಚಿವ ಅಜಯ್ ಮಿಶ್ರಾರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಮತ್ತು ಕಿಸಾನ್ ಆಂದೋಲನದ ವೇಳೆ ಸಾವನ್ನಪ್ಪಿದ ಎಲ್ಲಾ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.