ಬೆಂಗಳೂರು : ರಾಜ್ಯದಲ್ಲಿ ಇತ್ತೀಚೆಗೆ ಮುಸ್ಲಿಮ್ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಸಮುದಾಯದ ಆರಾಧನಾಲಯಗಳ ಮೇಲೆ ನಡೆಯುತ್ತಿರುವ ದಾಳಿ ಹಾಗೂ ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಚರ್ಚಿಸಲು ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ವೇದಿಕೆಯಾದ ಮುಸ್ಲಿಮ್ ಮುತ್ತಹಿದಾ ಮಹಾಜ್ ನ ನಿಯೋಗವು ಬುಧವಾರ ರಾಜ್ಯ ಪೋಲಿಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ಅವರನ್ನು ಭೇಟಿಯಾಯಿತು.
ಗದಗ ಜಿಲ್ಲೆಯ ನರಗುಂದ ಘಟನೆ ಮತ್ತು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿರುವ ಮಸೀದಿ ದಾಳಿಯ ಕುರಿತು ಡಿ.ಜಿ.ಪಿಯವರ ಗಮನ ಸೆಳೆದ ನಿಯೋಗವು ತಮ್ಮ ಕಳವಳವನ್ನು ವ್ಯಕ್ತಪಡಿಸಿತು.
ನಿಯೋಗದೊಂದಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಡಿಜಿಪಿ ಪ್ರವೀಣ್ ಸೂದ್, ನರಗುಂದ ಹಾಗೂ ಮಸೀದಿ ದಾಳಿ ಘಟನೆಯ ಕುರಿತು ತಮ್ಮ ವಿಷಾದವನ್ನು ವ್ಯಕ್ತಪಡಿಸಿ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಹಾಗು ಮುಂದೆ ಇಂತಹ ಕೃತ್ಯ ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ.ಬೆಳಗಾಮಿ ಮುಹಮ್ಮದ್ ಸಾದ್ ರವರ ನೇತೃತ್ವದ ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ಹಿರಿಯ ಮುಸ್ಲಿಂ ಮುಖಂಡ ಜಿ.ಎ.ಬಾವಾ, ಜಮಾಅತ್ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ, ಮಹಾಝ್ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಎಪಿಸಿಆರ್ ಕಾರ್ಯದರ್ಶಿ ಅಡ್ವೊಕೇಟ್ ನಿಯಾಝ್, ಎಸ್ಐಓ ಕಾರ್ಯದರ್ಶಿಗಳಾದ ಅಬ್ದುಲ್ ಹಸೀಬ್ ಹಾಗೂ ನಾಸೀರ್ ಉಡುಪಿ ಮತ್ತು ಜಮೀಯ್ಯತುಲ್ ಉಲೇಮಾದ ತಫ್ಹೀಮ್ ಮಾರೂಪ್ ಉಪಸ್ಥಿತರಿದ್ದರು.