ಬ್ರಿಟನ್: ಬ್ರಿಟನ್’ನ ಲೀಸೆಸ್ಟರ್’ನಲ್ಲಿ ಬಲಪಂಥೀಯ ಹಿಂದುತ್ವವಾದಿಗಳು ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿದ ದಾಂಧಲೆಯನ್ನು ಬ್ರಿಟನ್ ಮುಸ್ಲಿಮ್ ಕೌನ್ಸಿಲ್ ಖಂಡಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಬ್ರಿಟನ್’ನ ಮುಸ್ಲಿಮ್ ಕೌನ್ಸಿಲ್ 500ಕ್ಕೂ ಅಧಿಕ ರಾಷ್ಟ್ರೀಯ ಅಂಗಸಂಸ್ಥೆಗಳು, ಪ್ರಾದೇಶಿಕ ಮತ್ತು ಸ್ಥಳೀಯ ಸಂಸ್ಥೆಗಳು, ಮಸೀದಿಗಳು, ದತ್ತಿ ಸಂಸ್ಥೆ ಮತ್ತು ವೃತ್ತಿಪರ ನೆಟ್’ವರ್ಕ್’ಗಳನ್ನು ಹೊಂದಿರುವ ಯುಕೆಯ ಅತಿ ದೊಡ್ಡ ಮುಸ್ಲಿಮ್ ಸಂಸ್ಥೆಯಾಗಿದೆ.
ಕಳೆದ ಕೆಲವು ದಿನಗಳಲ್ಲಿ ಲೀಸೆಸ್ಟರ್’ನ ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳ ಮಧ್ಯೆ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಈ ಮಧ್ಯೆ ಸ್ಥಳೀಯವಾಗಿ ಬೇರುಬೀಡುತ್ತಿರುವ ಬಲಪಂಥೀಯ ಹಿಂದುತ್ವವಾದಿಗಳ ಹಿಂಸಾತ್ಮಕ ನಡೆಯ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳಗಳು ಬೆಳೆಯುತ್ತಿವೆ.
ಮುಸ್ಲಿಮ್ ಮತ್ತು ಸಿಖ್ ಸಮುದಾಯ ಪ್ರಾಬಲ್ಯವಿರುವ ಗ್ರೀನ್ ಲೇನ್ ರಸ್ತೆಯಲ್ಲಿ ಹಿಂದುತ್ವವಾದಿಗಳು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಾ ದಾಂಧಲೆ ನಡೆಸಿದ್ದರು.
ಭಾರತದಲ್ಲಿ ಬಲಪಂಥೀಯ ಗುಂಪುಗಳು ನಡೆಸುತ್ತಿರುವ ಪ್ರಚಾರ ಮತ್ತು ಹಿಂದುತ್ವದ ಅಜೆಂಡಾದ ಬಗ್ಗೆ ಹಲವು ಸಮುದಾಯಗಳು ತಮ್ಮ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದು, ಈ ಬೆಳವಣಿಗೆಗಳು ಇದೀಗ ಬ್ರಿಟನ್’ನ ಬೀದಿಗಳಲ್ಲಿ ಕಾಣುತ್ತಿದ್ದೇವೆ. ಸಂಘಪರಿವಾರದ ಈ ಪ್ರಚೋದನೆಗಳು ಮುಸ್ಲಿಮ್, ಸಿಖ್ ಮತ್ತು ಇತರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿವೆ ಮತ್ತು ಇದರ ಪರಿಣಾಮವಾಗಿ ಲೀಸೆಸ್ಟರ್’ನಲ್ಲಿ ಸ್ಥಳೀಯ ಸಮುದಾಯಗಳ ನಡುವೆ ಹಗೆತನವನ್ನು ಹುಟ್ಟುಹಾಕಿದೆ ಎಂದು MCB ಪ್ರಧಾನ ಕಾರ್ಯದರ್ಶಿ ಝಾರಾ ಮುಹಮ್ಮದ್ ತಿಳಿಸಿದ್ದಾರೆ.