ಮಸ್ಕತ್: ಸಂಭ್ರಮದ ‘ಬ್ಯಾರಿ ಗೌಜಿ ಗಮ್ಮತ್’ನಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬಗೆ ಸನ್ಮಾನ

Prasthutha|

ಮಸ್ಕತ್: ಇಂಡಿಯನ್ ಸೋಶಿಯಲ್ ಕ್ಲಬ್ ಒಮಾನ್ ಇದರ ಬ್ಯಾರಿ ವಿಂಗ್ ವತಿಯಿಂದ ಆಯೋಜಿಸಲಾದ “ಗೌಜಿ ಗಮ್ಮತ್” ಕಲಾ ಸಾಂಸ್ಕೃತಿಕ ಕಾರ್ಯಕ್ರಮವು ಸಂಭ್ರಮ ಸಡಗರದೊಂದಿಗೆ ಜರುಗಿತು.

- Advertisement -


ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬರನ್ನು ಬ್ಯಾರಿ ವಿಂಗ್ ವತಿಯಿಂದ ಅಭೂತಪೂರ್ವವಾಗಿ ಸನ್ಮಾನಿಸಲಾಯಿತು.

ಗ್ರಾಮೀಣ ಶೈಲಿಯ ಅಂಗಡಿ ಮುಂಗಟ್ಟು, ಹೊಟೇಲು, ತಿಂಡಿತಿನಿಸು, ವಿನೋದಾವಳಿ ಆಟೋಟಗಳು, ದಫ್ ಒಪ್ಪನ, ಹಾಡು, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಗೌಜಿ ಗಮ್ಮತ್ ಗೆ ವಿಶೇಷ ಮೆರುಗು ನೀಡಿದವು.

- Advertisement -


ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾರಿ ವಿಂಗ್ ಕನ್ವೀನರ್ ಫಯಾಝ್ ಹಸೈನಾರ್ ಮಾತನಾಡಿ, ಪದ್ಮಶ್ರೀ ಹರೇಕಳ ಬ್ಯಾರಿ ಸಮುದಾಯದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೇರಿಸಿದ್ದಾರೆ. ಶಿಕ್ಷಣ ಕ್ರಾಂತಿಗಾಗಿ ತನ್ನೆಲ್ಲ ತೊಡಕುಗಳನ್ನು ಮೆಟ್ಟಿ ನಿಂತು ತನ್ನ ಊರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬೆಳೆಸಿರುವುದು ವಿಶೇಷ ಸಾಧನೆ. ಅವರ ಛಲ, ದೃಢ ಹೆಜ್ಜೆ, ದೂರಾಲೋಚನೆ ಯುವ ಪೀಳಿಗೆಗೆ ಮಾದರಿಯಾಗಲಿ ಎಂದು ಹಾರೈಸಿದರು.


ಸನ್ಮಾನ ಸ್ವೀಕರಿಸಿದ ಹರೇಕಳ ಹಾಜಬ್ಬ ಮಾತನಾಡಿ, ಓರ್ವ ಸಾಮಾನ್ಯ ವ್ಯಕ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಹ್ವಾನಿಸಿ ಸನ್ಮಾನಿಸಿದ ತಮಗೆ ಕೃತಜ್ಞತೆಗಳು. ಶೈಕ್ಷಣಿಕ ಕ್ರಾಂತಿಯ ಪಯಣವು ಇನ್ನೂ ಮುಂದುವರಿಯಲಿದೆ. ಇನ್ನಷ್ಟು ಕನಸುಗಳಿವೆ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಇಂಡಿಯನ್ ಸೋಶಿಯಲ್ ಕ್ಲಬ್ ಒಮಾನ್ ಇದರ ಪ್ರಧಾನ ಕಾರ್ಯದರ್ಶಿ ಬಾಬು ರಾಜೇಂದ್ರನ್, ಜೊತೆ ಕಾರ್ಯದರ್ಶಿಗಳಾದ ಸುಹೈಲ್ ಖಾನ್, ಸಂಜಿತ್ ಕನೋಜಿಯ, ತುಳು ವಿಂಗ್ ಕನ್ವೀನರ್ ರಮಾನಂದ ಶೆಟ್ಟಿ ಮುಂತಾದವರು ಶುಭಹಾರೈಸಿದರು.


ಬ್ಯಾರಿ ಗೌಜಿ ಗಮ್ಮತ್ ಸ್ವಾಗತ ಸಮಿತಿಯ ಅಧ್ಯಕ್ಷ ಮೋನಬ್ಬ ಬ್ಯಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬ್ಯಾರಿ ವಿಂಗ್ ಕೋ ಕನ್ವೀನರ್ ಮುಹಮ್ಮದ್ ಮಸೂದ್ ಧನ್ಯವಾದ ಸಲ್ಲಿಸಿದರು. ಮುಹಮ್ಮದ್ ಸರಾಝ್ ಮತ್ತು ಆಸಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದು, ಊರ ಶೈಲಿಯ ಊಟೋಪಚಾರವನ್ನು ಏರ್ಪಡಿಸಲಾಗಿತ್ತು.

Join Whatsapp