July 21, 2021

ಆರ್‌ ಟಿಐ ಕಾರ್ಯಕರ್ತನ ಬರ್ಬರ ಕೊಲೆ: ಮೂವರು ಸೆರೆ

ಬೆಂಗಳೂರು,ಜು.21: ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಾವರೆಕೆರೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.


ತಾವರೆಕೆರೆಯ ಪ್ರದೀಪ್ ಕುಮಾರ್ ಅಲಿಯಾಸ್ ಪ್ರದೀಪ್ (33), ತಾವರಕೆರೆಯ ಮಂಜುನಾಥ ನಗರದ ಸತೀಶ್ .ಟಿ.ಸಿ (20), ತಾವರಕೆರೆಯ ಯಲಚಗುಪ್ಪೆಯ ತೇಜಸ್ ಕುಮಾರ್ ಎ (22) ಬಂಧಿತ ಆರೋಪಿಗಳಾಗಿದ್ದಾರೆ ಎಂದು ರಾಮನಗರ ಎಸ್ ಪಿ ಗಿರೀಶ್ ತಿಳಿಸಿದ್ದಾರೆ.


ಆರ್ ಟಿಐ ಕಾರ್ಯಕರ್ತ ವೆಂಕಟೇಶ್ ಅಲಿಯಾಸ್ ಮಹೀಮಯ್ಯ (43) ಅವರ ಮೇಲೆ ಜುಲೈ 15 ರಂದು ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬಲಗೈ ಹಾಗೂ ಕಾಲುಗಳನ್ನು ಕತ್ತರಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್ ಅವರು ಚಿಕಿತ್ಸೆ ಫಲಕಾರಿಯಾಗದೇ ಕಳೆದ ಜು.19ರಂದು ಮೃತಪಟ್ಟಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ತಾವರೆಕೆರೆ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಹಣಕಾಸು ವಿಚಾರವಾಗಿ ಕೊಲೆ ನಡೆದಿರುವುದನ್ನು ಪತ್ತೆಹಚ್ಚಿದೆ ಎಂದರು.
ಫೈನಾನ್ಶಿಯರ್ ಪ್ರದೀಪ್ ಕುಮಾರ್ ಎಂಬುವರು ವೆಂಕಟೇಶ್ ಅವರಿಗೆ ರೂ.10 ಲಕ್ಷ ಸಾಲ ನೀಡಿದ್ದಾರೆ. ಈ ಹಣಕ್ಕೆ ಅಲ್ಪ ಪ್ರಮಾಣದ ಬಡ್ಡಿ ನೀಡಿದ್ದ ವೆಂಕಟೇಶ್ ಅವರು, ಸಾಲದ ಹಣವನ್ನು ಹಿಂದಿರುಗಿಸಿರಲಿಲ್ಲ.


ಇದರಿಂದ ಬೇಸರಗೊಂಡಿದ್ದ ಪ್ರದೀಪ್ ಅವರು ಹಲವು ಬಾರಿ ಹಣವನ್ನು ಹಿಂದಿರುಗಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಒಪ್ಪದ ವೆಂಕಟೇಶ್ ಅವರು, ಪ್ರದೀಪ್ ವಿರುದ್ಧ ಪೊಲೀಸರಿಗೆ ದೂರು ನೀಡುವ ಬದರಿಕೆ ಹಾಕಿದ್ದಾರೆ. ಹೀಗಾಗಿ ವೆಂಕಟೇಶ್ ಅವರಿಗೆ ಪಾಠ ಕಲಿಸುವ ಸಲುವಾಗಿ ನಾಲ್ಕು ಮಂದಿಗೆ ಸುಪಾರಿ ನೀಡಿದ್ದಾರೆ. ವೆಂಕಟೇಶ್ ಅವರ ಮೇಲೆ ದಾಳಿ ನಡೆಸುವಂತೆ ತಿಳಿಸಿದ್ದಾರೆ.
ಪ್ರದೀಪ್ ಸುಪಾರಿ ನೀಡಿದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳು ವೆಂಕಟೇಶ್ ಅವರ ಮೇಲೆ ದಾಳಿ ನಡೆಸಿದ್ದಾರೆ. ಪ್ರಕರಣ ಸಂಬಂಧ ಪ್ರದೀಪ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಗಿರೀಶ್ ತಿಳಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!