ಸದನದಿಂದ ವಿಪಕ್ಷದ 141 ಸಂಸತ್ ಸದಸ್ಯರ ಅಮಾನತು ಮಾಡಿರುವ ಮೋದಿ ಸರ್ಕಾರದ ಕ್ರಮ ನಿರಂಕುಶ ಪ್ರಭುತ್ವದ ಪರಮಾವಧಿ, ಪ್ರಜಾಪ್ರಭುತ್ವದ ಹತ್ಯೆ: ಅಬ್ದುಲ್ ಮಜೀದ್

Prasthutha|

ಬೆಂಗಳೂರು: ಸಂಸತ್ತು ಪ್ರಜಾಪ್ರಭುತ್ವದ ಆತ್ಮ. ಅಲ್ಲಿ ಅಧಿಕಾರ ಪಕ್ಷದ ಪ್ರಾಮುಖ್ಯತೆ ಎಷ್ಟಿರುತ್ತದೋ ವಿಪಕ್ಷದ ಅವಶ್ಯಕತೆಯೂ ಅಷ್ಟೇ ಮುಖ್ಯವಾಗಿರುತ್ತದೆ. ವಿಪಕ್ಷವಿಲ್ಲದ ಪ್ರಜಾಪ್ರಭುತ್ವ ಆತ್ಮವಿಲ್ಲದ ದೇಹವಿದ್ದ ಹಾಗೆ. ಮೋದಿ ಸರ್ಕಾರ ಸುಮಾರು 141 ವಿಪಕ್ಷದ ಸಂಸತ್ ಸದಸ್ಯರನ್ನು ಅಂದರೆ ಸುಮಾರು 70% ವಿರೋಧ ಪಕ್ಷದ ಚುನಾಯಿತ ಪ್ರತಿನಿಧಿಗಳನ್ನು ಅಮಾನತು ಮಾಡಿರುವ ಕ್ರಮ ನಿರಂಕುಶ ಪ್ರಭುತ್ವದ ಪರಮಾವಧಿ ಮತ್ತು ಪ್ರಜಾಪ್ರಭುತ್ವದ ಹತ್ಯೆಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಅಭಿಪ್ರಾಯಪಟ್ಟಿದ್ದಾರೆ.

- Advertisement -

ದೇಶದ ಅತಿದೊಡ್ಡ ಪಂಚಾಯತ್ ಎಂದು ಕರೆಯಲ್ಪಡುವ ಸಂಸತ್ತಿನ ಒಳಗೆ ನಿರಾಯಾಸವಾಗಿ ಅಪರಿಚಿತರು ಪ್ರವೇಶ ಮಾಡಿ ಹೊಗೆ ಬಾಂಬೆ ಸ್ಪೋಟಿಸಿರುವುದು ಮೋದಿ ಸರ್ಕಾರದ ವೈಫಲ್ಯ. ಆ ಕುರಿತು ಸಂಸತ್ತಿನಲ್ಲಿ ದೇಶದ ಗೃಹಮಂತ್ರಿ ಹೇಳಿಕೆ ನೀಡಬೇಕಾದದ್ದು ಅವರ ಪ್ರಾಥಮಿಕ ಕರ್ತವ್ಯ. ಆದರೆ ಸರ್ವಾಧಿಕಾರಿ ಧೋರಣೆಯ ಈ ಸರ್ಕಾರ ಹೇಳಿಕೆ ನೀಡುವ ಬದಲು ಈ ವಿಚಾರದಲ್ಲಿ ಸಂಸತ್ ನಲ್ಲಿ ಚರ್ಚೆಗೆ ಒತ್ತಾಯಿಸಿದ ವಿಪಕ್ಷದ ಸಂಸದರನ್ನು ಅಮಾನತು ಮಾಡುವ ಮೂಲಕ ವಿಪಕ್ಷದ ಬಾಯಿಯನ್ನು ಮಾತ್ರವಲ್ಲ, ಇಡೀ ದೇಶದ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿದೆ. ಇದು ದೇಶದಲ್ಲಿ ಅಘೋಷಿತ ತುರ್ತುಸ್ಥಿತಿಯ ವಾತಾರಣ ಇದೆ ಎಂದು ತೋರಿಸುತ್ತದೆ. ಮೋದಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಎಸ್‌ಡಿಪಿಐ ತೀವ್ರವಾಗಿ ಖಂಡಿಸುತ್ತದೆ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸದನದಲ್ಲಿ ಬಹುತೇಕ ಎಲ್ಲ ವಿಪಕ್ಷ ಸದಸ್ಯರು ಅಮಾನತಾಗಿ ಹೊರಗುಳಿದಿರುವ ಸಂದರ್ಭದಲ್ಲಿ ಭಾರತದ ನ್ಯಾಯ ಸಂಹಿತೆಗಳನ್ನು ಮರು ವ್ಯಾಖ್ಯಾನ ಮಾಡುವಂತಹ ಬಹುಮುಖ್ಯ ಕಾಯಿದೆಯನ್ನು ಮಂಡಿಸಿ ಅದನ್ನು ಅಂಗೀಕರಿಸುವ ಸಂಚು ಮಾಡಲಾಗಿದೆ. ಈ ಅಮಾನತುಗಳ ಹಿಂದೆ ಈ ಮಸೂದೆಗೆ ಎದುರಾಗಬಹುದಾದ ಆಕ್ಷೇಪಣೆ ಮತ್ತು ವಿರೋಧವನ್ನು ಇಲ್ಲವಾಗಿಸುವುದೇ ಆಗಿದೆ ಎಂದು ಮಜೀದ್ ಅವರು ಆರೋಪಿಸಿದರು.

ಬಿಜೆಪಿ ಮತ್ತು ಮೋದಿಯವರು ತಮ್ಮ ಈ ದುರಹಂಕಾರದ, ಸಂವಿಧಾನ ವಿರೋಧಿ ನಡವಳಿಕೆಯನ್ನು ತಿದ್ದಿಕೊಂಡು ವಿಪಕ್ಷದ ಎಲ್ಲ ಸದಸ್ಯರ ಅಮಾನತು ವಾಪಸ್ ಪಡೆದು ಪ್ರಜಾಪ್ರಭುತ್ವದ ಗೌರವವನ್ನು ಉಳಿಸಬೇಕು ಎಂಬ ಆಗ್ರಹದೊಂದಿಗೆ SDPI ರಾಜ್ಯಾದ್ಯಂತ 20/12/2023 ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು,ಈ ಪ್ರತಿಭಟನೆಗೆ ಪ್ರಜಾಪ್ರಭುತ್ವವಾದಿಗಳೆಲ್ಲ ಭಾಗಿಯಾಗಬೇಕೆಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ. ಇದರ ಭಾಗವಾಗಿ ಎಸ್‌ಡಿಪಿಐ ದ.ಕ ಜಿಲ್ಲಾ ಸಮಿತಿ ವತಿಯಿಂದ ಸಂಜೆ 4.30 ಕ್ಕೆ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಸಭೆ ನಡೆಯಲಿದೆ.ಜಿಲ್ಲೆಯ ಸಮಸ್ತ ನಾಗರಿಕರು ಈ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಬೇಕೆಂದು ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಮನವಿ ಮಾಡಿದ್ದಾರೆ



Join Whatsapp