ಬೆಂಗಳೂರಿನಲ್ಲಿ ಯುವಕನ ಕೊಲೆ: ಆರೋಪಿಯ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು

Prasthutha|

ಬೆಂಗಳೂರು: ಯುವತಿಯ ವಿಚಾರವಾಗಿ ಇಬ್ಬರ ನಡುವೆ ನಿನ್ನೆ ಮಧ್ಯರಾತ್ರಿ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದ್ದು ಕೊಲೆಗಾರರನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಇಬ್ಬರಿಗೆ ಪುಲಕೇಶಿನಗರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

- Advertisement -

ಪೊಲೀಸರ ಗುಂಡೇಟು ತಗುಲಿ ಗಾಯಗೊಂಡ ಕೊಲೆಗಾರರಾದ ಸೈಯದ್ ಮೋಯಿನ್ ಹಾಗೂ, ಅದ್ನಾನ್ ಖಾನ್ ಬೌರಿಂಗ್  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

ಕಾಡುಗೊಂಡನಹಳ್ಳಿಯ ಮುಹಮ್ಮದ್ ಉಸ್ಮಾನ್ ಕೊಲೆಯಾದ ಯುವಕ. ಯುವತಿಯ ವಿಚಾರಕ್ಕೆ ಉಸ್ಮಾನ್ ಹಾಗೂ ಸೈಯದ್ ಮೋಹಿನ್ ನಡುವೆ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ಉಸ್ಮಾನ್ ಕೊಲೆಗೆ ಸಂಚು ರೂಪಿಸಿದ್ದ ಮೋಹಿನ್, ಶಿವಾಜಿ ನಗರದಿಂದ ದುಷ್ಕರ್ಮಿಗಳನ್ನು ಕರೆಸಿ ಸಂಚು ರೂಪಿಸಿದ್ದ ಎನ್ನಲಾಗಿದೆ.

- Advertisement -

ಅದರಂತೆ ರಾತ್ರಿ 11.30ರ ಸುಮಾರಿಗೆ ಪುಲಕೇಶಿ ನಗರದ ಡೌನ್ ಟೌನ್ ಬಳಿ ಜಗಳ ತೆಗೆದು ಮಾರಕಾಸ್ತ್ರ ಗಳಿಂದ ಕೊಚ್ಚಿ ಉಸ್ಮಾನ್ ನನ್ನು ಕೊಲೆ ಮಾಡಿದ್ದಾರೆ.

ಕೊಲೆಯ ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಇನ್ಸ್ಪೆಕ್ಟರ್ ಆನಂದ್ ಹಾಗೂ ಸಬ್ ಇನ್ಸ್ಪೆಕ್ಟರ್ ರೂಮಾನ್ ಮತ್ತವರ ತಂಡ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಲೆಗಾರರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದೆ.

ಕಾಡುಗೊಂಡನಹಳ್ಳಿಯ ಮುಹಮ್ಮದ್ ಉಸ್ಮಾನ್ ನನ್ನು ಕೊಲೆಗೈದು ಪರಾರಿಯಾಗಿದ್ದ ದುಷ್ಕರ್ಮಿಗಳು ಇಂದು ಪುಲಕೇಶಿ ನಗರದ ಬಳಿ ಅಡಗಿರುವ ಮಾಹಿತಿ ಲಭ್ಯವಾಗಿದ್ದು ತಕ್ಷಣವೇ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಕಾರ್ಯಾಚರಣೆ ಕೈಗೊಂಡ ಪೊಲೀಸರ ವಾಹನ ಕಂಡು ಓಡಲು ಯತ್ನಿಸಿದ ಆರೋಪಿಗಳನ್ನು ಬಂಧಿಸಲು ಹೋದಾಗ ತಿರುಗಿ ಮಾರಕಾಸ್ತ್ರದಿಂದ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ವೇಳೆ ಪಿಎಸ್ ಐ ರೂಮಾನ್ ಮತ್ತು ಆನಂದ್ ಆತ್ಮರಕ್ಷಣೆಗೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ, ಆರೋಪಿಗಳು ಮತ್ತೆ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದಾಗ ಸ್ವಯಂ ರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು ಅವೆರಡೂ ಸೈಯದ್ ಮೋಹಿನ್ ಮತ್ತು ಅದ್ನಾನ್ ಖಾನ್ ಕಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ.

ಅವರಿಬ್ಬರನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ಕಾರ್ಯಾಚರಣೆ ವೇಳೆ ನಡೆಸಿದ ಹಲ್ಲೆಯಿಂದ ಗಾಯಗೊಂಡ ಇಬ್ಬರು ಪೊಲೀಸರನ್ನು ಬೌರಿಂಗ್ ಆಸ್ಪತ್ರೆಗೆ ಸೇರಿಸಲಾಗಿದೆ.

ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಉಳಿದ , ಅರ್ಬಾಜ್, ಮಜರ್, ಸೈಯದ್ ಸಾಕಿಬ್ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಸದ್ಯ ಗಾಯಾಳು ಆರೋಪಿಗಳು ಹಾಗೂ ಗಾಯಗೊಂಡ ಪೊಲೀಸರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.



Join Whatsapp