ಬೆಂಗಳೂರು: ಪರಸ್ಪರ ಪ್ರೀತಿಸಿದ ಹುಡುಗಿ-ಹುಡುಗನನ್ನು ಹಿಂದೂ-ಮುಸ್ಲಿಂ ಎಂಬ ಕಾರಣಕ್ಕೆ, ಮುಸ್ಲಿಂ ಹುಡುಗನನ್ನು ಬೆಳಗಾವಿಯಲ್ಲಿ ಕೊಲೆಗೈದು ದೇಹವನ್ನು ವಿರೂಪಗೊಳಿಸಿ ಅಟ್ಟಹಾಸಗೈದಿರುವ ಶ್ರೀರಾಮಸೇನೆಯವರೆಂದು ಹೇಳಲಾದ ಕೊಲೆಗಡುಕರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಮತ್ತು ತನ್ನ ಏಕೈಕ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ತಾಯಿಗೆ ಪರಿಹಾರವನ್ನು ನೀಡಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಒತ್ತಾಯಿಸಿದೆ.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ಈ ಕ್ರೂರ ಘಟನೆಯ ಹಿಂದೆ ಶ್ರೀರಾಮಸೇನೆ ಸಂಘಟನೆಯ ಸ್ಥಳೀಯ ಮುಖಂಡರು ಇರುವರೆಂದು ಹೇಳಲಾಗಿದೆ. ಕೋಮು ನೆಲೆಯಲ್ಲಿ ಸಮಾಜವನ್ನು ವಿಭಜಿಸುವ ಉದ್ದೇಶದ ಇಂತಹ ಸಂಘಟನೆಗಳು ಮತ ಧರ್ಮಗಳನ್ನು ಮುಂದಿಟ್ಟು ಕೊಲೆಗಳನ್ನು ಮಾಡುವ ಅಪಾಯಕಾರಿ ಪ್ರವೃತ್ತಿ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಬಹಿರಂಗವಾಗಿ ಅನ್ಯಧರ್ಮೀಯರ ಬಗ್ಗೆ ದ್ವೇಷದ ಮತ್ತು ವಿಷಕಾರಿ ಹೇಳಿಕೆಗಳನ್ನು ನೀಡುವುದು ಮತ್ತು ಬೆದರಿಕೆಗಳನ್ನು ಒಡ್ಡುವುದು ಹೆಚ್ಚಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂತಹ ಶಕ್ತಿಗಳಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಸಾಮಾಜಿಕ ಹಂದರವನ್ನು ದುರ್ಬಲಗೊಳಿಸುವ ಇಂತಹ ಕೋಮುವಾದಿ ಮತ್ತು ಮತಾಂಧ ಶಕ್ತಿಗಳಿಗೆ ಕಡಿವಾಣ ಹಾಕುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ರಾಜ್ಯದ ಬಿಜೆಪಿ ಸರ್ಕಾರ, ಬಜರಂಗದಳ ಮತ್ತು ಶ್ರೀರಾಮಸೇನೆಯಂತಹ ಕೋಮುವಾದಿ ಸಂಘಟನೆಗಳ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಬೆಳಗಾವಿಯ ಮುಸ್ಲಿಂ ಹುಡುಗನ ಕೊಲೆ ಪ್ರಕರಣವನ್ನು ನಿಸ್ಪಕ್ಷವಾಗಿ ತನಿಖೆ ನಡೆಸಬೇಕು ಮತ್ತು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.