ಮುನಿರತ್ನ ಬಂಧನ ದ್ವೇಷದ ರಾಜಕಾರಣ: ಆರ್ ಅಶೋಕ್

Prasthutha|

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬಂಧಿಸಿರುವುದು ದ್ವೇಷದ ರಾಜಕಾರಣ. ಆ ಧ್ವನಿ ಮುದ್ರಣ ಅವರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕಿತ್ತು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

- Advertisement -

ರಾಜ್ಯಪಾಲರು ತಮ್ಮ ಮೇಲೆ ತಕ್ಷಣ ಕ್ರಮ ಕೈಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದರು.‌ ಆದರೂ ಅದು ಈಗ ನ್ಯಾಯಾಲಯದಲ್ಲಿದ್ದು, ಅದಕ್ಕೆ ನಾವ್ಯಾರೂ ಆಕ್ಷೇಪ ಮಾಡಿಲ್ಲ. ಆದರೆ ಇಲ್ಲಿ ದೂರು ನೀಡಿದ ಕೂಡಲೇ ವಿಚಾರಣೆ ಮಾಡದೆ‌ ನೋಟಿಸ್‌ ನೀಡದೆ ಬಂಧಿಸಲಾಗಿದೆ. ಇಲ್ಲಿ ಆತುರದ‌ ಕ್ರಮವಾಗಿದ್ದು, ಏಕಾಏಕಿ ಬಂಧನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜರಾಜೇಶ್ವರಿ ನಗರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಲೀಡ್ ಬಂದಿರುವುದು ಕೂಡ ಇದಕ್ಕೆ ಕಾರಣ. ಧ್ವನಿ ಮುದ್ರಣವನ್ನು ಎಫ್‌ಎಸ್‌ಎಲ್ ಗೆ ಕಳುಹಿಸಿ,‌ ತನಿಖೆ ಮಾಡಿ ಬಳಿಕ ಕ್ರಮ ಕೈಗೊಂಡಿದ್ದರೆ ನಾವ್ಯಾರೂ ಮಾತಾಡುತ್ತಿರಲಿಲ್ಲ. ಯಾವುದೇ ಪ್ರಕರಣದಲ್ಲಿ ಸತ್ಯವನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

- Advertisement -

ಸಚಿವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ: ಇದು ಪೂರ್ವ ಯೋಜಿತ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಜಾತಿ ನಿಂದನೆ ಮಾಡಿಲ್ಲ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ. ಇದು ಸಾಬೀತು ಕೂಡ ಆಗಿಲ್ಲ. ಈ ರೀತಿ ಪ್ರಕರಣ ದಾಖಲಾದಾಗ ಪರಿಶೀಲಿಸಿಯೇ ಕ್ರಮ ಕೈಗೊಳ್ಳಬೇಕು. ರಾಯಚೂರಿನಲ್ಲಿ ಪೊಲೀಸ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಶಾಸಕನನ್ನು ಸಿಎಂ ಮನೆಗೆ ಕರೆಸಿಕೊಂಡು ಕಾಫಿ ಕೊಟ್ಟಿದ್ದರು‌. ಕೃಷಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದರು ಸಚಿವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಸರ್ಕಾರ ಎಷ್ಟೇ ಪ್ರಕರಣ‌ ದಾಖಲಿಸಿದರೂ ಬಿಜೆಪಿ ಹೆದರುವುದಿಲ್ಲ. ಸರ್ಕಾರಕ್ಕೆ ಈಗ ಭಯ ಬಂದಿದೆ. ಪ್ರತಿ ದಿನ ವಸೂಲಿ, ಭ್ರಷ್ಟಾಚಾರ ‌ನಡೆಯುತ್ತಿರುವುದು ಮಾಧ್ಯಮಗಳಲ್ಲಿ ಬರುತ್ತಿದೆ. ಆದ್ದರಿಂದ ಹೀಗೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಶೋಕ್ ಹೇಳಿದರು.



Join Whatsapp