MRPL ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಬೀಗ ಜಡಿಯುತ್ತೇವೆ: ಮುನೀರ್ ಕಾಟಿಪಳ್ಳ ಎಚ್ಚರಿಕೆ

Prasthutha|

ಮಂಗಳೂರು: ತೋಕೂರು ಹಳ್ಳ ಹಾಗೂ ಪಲ್ಗುಣಿ ನದಿಗೆ ಮಾರಕ ಕೈಗಾರಿಕಾ ತ್ಯಾಜ್ಯ ಹರಿಯಬಿಟ್ಟಿರುವ ಎಮ್ ಆರ್ ಪಿ ಎಲ್ ಕಂಪೆನಿ ಹಾಗೂ ಬೈಕಂಪಾಡಿ ಪರಿಸರದ ಮಧ್ಯಮ ಕೈಗಾರಿಕಾ ಘಟಕಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ “ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ” ನೇತೃತ್ವದಲ್ಲಿ ಬೈಕಂಪಾಡಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿ ಮುಂಭಾಗ ಗುರುವಾರ ಪ್ರತಿಭಟನಾ ಧರಣಿ ನಡೆಯಿತು.

- Advertisement -


ಪ್ರತಿಭಟನೆಯನ್ನು ಉದ್ದೇಶಿಸಿ ಮಾತಾಡಿದ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಎಮ್ ಆರ್ ಪಿ ಎಲ್ ಸಹಿತ ಸುತ್ತಲಿನ ಕೈಗಾರಿಕೆಗಳು ತಮ್ಮ ಕೈಗಾರಿಕಾ ತ್ಯಾಜ್ಯಗಳನ್ನು ನೇರವಾಗಿ ತೋಕೂರು ಹಳ್ಳಕ್ಕೆ ಹರಿಸುತ್ತಿರುವುದು ಆಘಾತಕಾರಿ. ಈ ಕುರಿತು ಹಲವು ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದರೂ ಯಾವುದೇ ಕ್ರಮಗಳು ಜರುಗಿರುವುದಿಲ್ಲ. ಎಮ್ ಆರ್ ಪಿ ಎಲ್ ನಂತಹ ಸಾರ್ವಜನಿಕ ರಂಗದ ಬೃಹತ್ ಕಂಪೆನಿಯೂ ನಿರ್ಲಜ್ಜವಾಗಿ ಕುಡಿಯುವ ನೀರಿನ ಮೂಲಗಳಿಗೆ ವಿಷ ಹರಿಸುವುದು ಯಾವ ಕಾರಣಕ್ಕೂ ಕ್ಷಮಾರ್ಹ ಅಲ್ಲ. ಈ ಕುರಿತು ಹಲವು ಬಾರಿ ಪ್ರತಿಭಟನೆ ಸಲ್ಲಿಸಿದ್ದರೂ ಎಮ್ ಆರ್ ಪಿ ಎಲ್ ಬೇಜವಾಬ್ದಾರಿ ಉತ್ತರಗಳನ್ನು ನೀಡಿ ಉದ್ದಟತನ ಮೆರೆಯುತ್ತಿದೆ ಎಂದು ಆರೋಪಿಸಿದರು.


ಇಂತಹ ಮಾಲಿನ್ಯಗಳ ಸತತ ಹರಿಯುವಿಕೆಯಿಂದ ತೋಕೂರು ಹಳ್ಳ, ಹಾಗೂ ಪಲ್ಗುಣಿ ನದಿಯ ನೀರು ವಿಷಮಯಗೊಂಡಿದೆ. ಅಂತರ್ಜಲ ಮಲಿನಗೊಂಡು ಸ್ಥಳೀಯ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಸಾಂಪ್ರದಾಯಿಕ ಮೀನುಗಾರಿಕೆಗೆ ಹೊಡೆತ ಬಿದ್ದಿದೆ. ಇಂತಹ ಗಂಭೀರ ಅಪರಾಧ ಎಸಗುತ್ತಿರುವ ಕಂಪೆನಿಗಳ ಮೇಲೆ ಕಾಲಮಿತಿಯೊಳಗಡೆ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಒಳಗೊಂಡ ತಂಡವನ್ನು ಎಮ್ ಆರ್ ಪಿ ಎಲ್ ಸಹಿತ ಸ್ಥಳೀಯ ಕೈಗಾರಿಕಾ ಘಟಕಗಳಿಗೆ ಕರೆದೊಯ್ದು ಪರಿಶೀಲನೆ ನಡೆಸಬೇಕು ಎಂದು ಮುನೀರ್ ಒತ್ತಾಯಿಸಿದರು.

- Advertisement -

ಪಲ್ಗುಣಿಯನ್ನು ಮಾಲಿನ್ಯದಿಂದ ರಕ್ಷಿಸಲು ಬಿಗು ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮಾಲಿನ್ಯ ನಿಯಂತ್ರ ಮಂಡಳಿ ಕಚೇರಿಗೆ ಬೀಗ ಜಡಿದು ಅನಿರ್ದಿಷ್ಟ ಧರಣಿ ನಡೆಸುವುದಾಗಿ ಎಚ್ಚರಿಸಿದರು.


ಪ್ರತಿಭಟನಾ ಸಭೆಯಲ್ಲಿ ತೋಕೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆವಿನ್ ಫೆರಾವೊ, ಸದಸ್ಯರಾದ ಅಬೂಬಕ್ಕರ್ ಬಾವ, ಜುಬೇದಾ, ನವಾಜ್ ಜೋಕಟ್ಟೆ, ಪಲ್ಗುಣಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷರಾದ ಅಬ್ದುಲ್ ತಯ್ಯೂಬ್ ಬೆಂಗ್ರೆ, ಡಿವೈಎಫ್ ಐ ಮುಖಂಡರಾದ ಆಶಾ ಬೋಳೂರು, ಸಿಲ್ವಿಯಾ ಜೋಕಟ್ಟೆ, ಪಿ ಜಿ ರಫೀಕ್, ಹೋರಾಟ ಸಮಿತಿಯ ಮುಖಂಡರಾದ ಶೇಖರ್ ನಿರ್ಮುಂಜೆ, ಹಸೈನಾರ್, ಹನೀಫ್ ಗುಡ್ಡೆ, ಅಮೀನಮ್ಮ, ರವಿ ತೋಕೂರು, ಪುಷ್ಪ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಡಿವೈಎಫ್ಐ ನಗರ ಸಮಿತಿ ಸದಸ್ಯ ಶ್ರೀನಾಥ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.


ಪ್ರತಿಭಟನೆಗೂ ಮುನ್ನ ಕೆಐಎಡಿಬಿ ಕಚೇರಿ ಮುಂಭಾಗದಿಂದ ಕೈಯಲ್ಲಿ ಪೊರಕೆ ಹಿಡಿದಿದ್ದ ಗ್ರಾಮಸ್ಥರು ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮುಂಭಾಗದ ವರಗೆ ಮೆರವಣಿಗೆ ನಡೆಸಿದರು. ಎಮ್ ಆರ್ ಪಿ ಎಲ್ ಹರಿಸಿದ ಪೆಟ್ರೋ ಮಾಲಿನ್ಯದಿಂದ ಕಪ್ಪು ಬಣ್ಣಕ್ಕೆ ತಿರುಗಿದ ತೈಲ ಮಿಶ್ರಿತ ತೋಕೂರು ಹಳ್ಳದ ನೀರನ್ನು ಬಾಟಲಿಯಲ್ಲಿ ತುಂಬಿಸಿ ಮಾಲಿನ್ಯ ನಿಯಂತ್ರಣ ಮಂಡಳಿ ಮುಂಭಾಗ ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.


ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಕೀರ್ತಿ ಕುಮಾರ್ ಪ್ರತಿಭಟನಾಕಾರರಲ್ಲಿ ಮಾತುಕತೆ ನಡೆಸಿದರು. ಬಾಟಲಿಯಲ್ಲಿ ತುಂಬಿಸಿ ತಂದಿದ್ದ ತೋಕೂರು ಹಳ್ಳದ ಮಲಿನ ನೀರು ಹಾಗೂ ಮನವಿ ಪತ್ರವನ್ನು ಕೀರ್ತಿ ಕುಮಾರ್ ಗೆ ಹಸ್ತಾಂತರಿಸಿದ ಪ್ರತಿಭಟನಾಕಾರರು ವಾರದೊಳಗಡೆ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತೆ ಪ್ರತಿಭಟಿಸುವುದಾಗಿ ಎಚ್ಚರಿಸಿದರು.



Join Whatsapp