ತಿಪಟೂರು: ನಗರದ ಗುರುಕುಲ ಕಾಲೇಜು ಆವರಣದಲ್ಲಿ ಆರ್ ಎಸ್ ಎಸ್ ಹಮ್ಮಿಕೊಂಡಿದ್ದ ಪಥ ಸಂಚಲನದಲ್ಲಿ ನಗರಸಭೆ ಪೌರಾಯುಕ್ತ ಉಮಾಕಾಂತ್ ಭಾಗಿಯಾಗಿದ್ದು ವಿವಾದಕ್ಕೆ ಕಾರಣವಾಗಿದೆ. RSS ಪಥ ಸಂಚನದಲ್ಲಿ ಆರ್ ಎಸ್ ಎಸ್ ಗಣವೇಷಧಾರಿಯಾಗಿ ಭಾಗಿಯಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಪೌರಾಯುಕ್ತ ಉಮಾಕಾಂತ್ ಭಾಗಿಯಾದ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರಿ ಅಧಿಕಾರಿಯಾಗಿ ಒಂದು ಸಂಘಟನೆ ನಡೆಸುವ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಪಾಲ್ಗೊಂಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಈ ಕುರಿತು ಮಾತನಾಡಿರುವ ನಗರಸಭೆ ಪೌರಾಯುಕ್ತ ನಾನು 30 ವರ್ಷಗಳಿಂದ ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದೇನೆ. ಈ ಹಿನ್ನೆಲೆಯಲ್ಲಿ ಪಥ ಸಂಚಲನದಲ್ಲಿ ಭಾಗವಹಿಸಿದ್ದೇನೆ. ಅಲ್ಲದೇ ‘ಸರ್ಕಾರಿ ನೌಕರರು ದೇಶದ್ರೋಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರದ ಸಂಘಟನೆಯ ಕಾರ್ಯಗಳಲ್ಲಿ ಭಾಗವಹಿಸಬಹುದು ಎಂದು ಹೇಳಿದ್ದಾರೆ.
ಇನ್ನು ಪೌರಾಯುಕ್ತರ ಧೋರಣೆ ಖಂಡಿಸಿ ಕಾಂಗ್ರೆಸ್ ತಾಲ್ಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ಮತ್ತು ಉಮಾಕಾಂತ್ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.