ಮಂಗಳೂರು: ಉದ್ಯಮಿ ಮುಮ್ತಾಝ್ ಅಲಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಬ್ದುಲ್ ಸತ್ತಾರ್ ಸೇರಿ ಮೂವರನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಅಬ್ದುಲ್ ಸತ್ತಾರ್, ಮುಸ್ತಫಾ ಮತ್ತು ಶಾಫಿ ಎಂಬವರನ್ನು ಬಂಧಿಸಿ ಕಾವೂರ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಮುಂದೆ ಹಾಜರುಪಡಿಸಿರುವುದಾಗಿ ಕಾವೂರು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಒಟ್ಟು ಆರು ಮಂದಿ ಆರೋಪಿಗಳಿದ್ದು, ನಿನ್ನೆ ಎ1 ರೆಹಮತ್ ಮತ್ತು ಆಕೆಯ ಪತಿ ಶೋಯೆಬ್ ಅವರನ್ನು ಬಂಧಿಸಲಾಗಿತ್ತು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಇಂದು ಮತ್ತೆ ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರು ಮಂದಿ ಆರೋಪಿಗಳ ಪೈಕಿ ಈವರೆಗೆ ಐವರು ಆರೋಪಿಗಳ ಬಂಧನವಾಗಿದ್ದು, ಮತ್ತೊಬ್ಬ ಆರೋಪಿ ಸಿರಾಜ್ ಎಂಬಾತ ತಲೆಮರೆಸಿಕೊಂಡಿದ್ದು ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಸಿದ್ದಾರ್ಥ್ ಗೋಯಲ್ ಮತ್ತು ದಿನೇಶ್ ಕುಮಾರ್ ರವರ ನಿರ್ದೇಶನದಂತೆ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುತ್ತಾರೆ. ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಮತ್ತು ಸಿಸಿಬಿ ಎಸ್ ಐ ಶರಣಪ್ಪ ಭಂಡಾರಿ ಮತ್ತು ಸಿಸಿಬಿ ಸಿಬ್ಬಂದಿಯವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಕಾವೂರು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ಮುಮ್ತಾಝ್ ಅಲಿ ಸಹೋದರ ಹೈದರಾಲಿ ನೀಡಿರುವ ದೂರಿನನ್ವಯ ಕಾವೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕಲಂ 308(2), 308(5),352, 351(2), 190, 108 ಬಿ.ಎನ್.ಎಸ್ 2023 ರಂತೆ ಪ್ರಕರಣ ದಾಖಲಾಗಿತ್ತು. ಮುಮ್ತಾಝ್ ಅಲಿ ಅವರನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿರುವ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಮಾಡಿರುವ ಆರೋಪದಲ್ಲಿ ಆರು ಮಂದಿ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.