ದುಬೈ: 1993ರ ಮುಂಬಯಿ ಸರಣಿ ಬಾಂಬ್ ಸ್ಪೋಟದಲ್ಲಿ ಶಾಮೀಲಾಗಿದ್ದ ಆರೋಪಿ ಅಬುಬಕರ್ ನನ್ನು ಯುಎಇ ಯಲ್ಲಿ ಭಾರತದ ಗುಪ್ತಚರ ಇಲಾಖೆ ಬಂಧಿಸಿದೆ. ಯುಎಇ ಮತ್ತು ಪಾಕಿಸ್ತಾನದಲ್ಲಿ ವಾಸ್ತವ್ಯ ಹೂಡುತ್ತಿದ್ದ ಅಬುಬಕರ್ ಇತ್ತೀಚೆಗೆ ಯುಎಇನಲ್ಲಿ ತಲೆಮರೆಸಿಕೊಂಡಿದ್ದಾಗಿ ಭಾರತದ ಗುಪ್ತಚರ ಇಲಾಖೆಗೆ ಲಭಿಸಿದ ಮಾಹಿತಿ ಮೇರೆಗೆ ಬಂಧಿಲಾಗಿದೆ.
1993ರಲ್ಲಿ ವಾಣಿಜ್ಯ ನಗರಿ ಮುಂಬೈಯ 12 ಸ್ಥಳಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿದ್ದು, 713 ಮಂದಿ ಗಾಯಗೊಂಡಿದ್ದರು. ಪಾಕಿಸ್ತಾನ್ ಆಕ್ರಮಿತ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ತಯಾರಿಕೆ ತರಬೇತಿ ಪಡೆದಿದ್ದ ಅಬುಬಕರ್ ಸರಣಿ ಬಾಂಬ್ ಸ್ಫೋಟಗಳ ಪ್ರಮುಖ ಸಂಚುಕೋರ ಎಂಬುದಾಗಿ ತಿಳಿದು ಬಂದಿದೆ.
2019ರಲ್ಲಿ ಯುಎಇನಲ್ಲಿ ಬಂಧಿಸಲಾಗಿತ್ತಾದರೂ ಕೆಲವೊಂದು ದಾಖಲೆಗಳ ಕೊರತೆಯಿಂದಾಗಿ ಬಿಡುಗಡೆಯಾಗಿದ್ದ ಅಬುಬಕರ್ ನನ್ನು ಇದೀಗ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಗಳು ಲಭಿಸಿವೆ.
ಬರೋಬ್ಬರಿ 29ವರ್ಷಗಳ ಬಳಿಕ ಮುಂಬಯಿ ಸರಣಿ ಬಾಂಬ್ ಸ್ಫೋಟದ ಪ್ರಮುಖ ಸಂಚುಕೋರ ಅಬುಬಕರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಯುಎಇನಿಂದ ಹಸ್ತಾಂತರಗೊಂಡ ಬಳಿಕ ಭಾರತದಲ್ಲಿ ವಿಚಾರಣೆ ಮುಂದುವರಿಯಲಿದೆ ಎಂದು ವರದಿಗಳು ತಿಳಿಸಿವೆ.