ಮುಂಬೈ ಗ್ಯಾಂಗ್ ಸ್ಟರ್ ಬಚ್ಚಖಾನ್ ಬೆಂಗಳೂರಿನಲ್ಲಿ ಬಂಧನ

Prasthutha|

ಬೆಂಗಳೂರು: ಹಲವು ಗಂಭೀರ ಅಪರಾಧ ಕೃತ್ಯಗಳ ಸಂಬಂಧ ಮುಂಬಯಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ಬಚ್ಚಖಾನ್ ನನ್ನು ಬಂಧಿಸುವಲ್ಲಿ ಅತ್ತಿಬೆಲೆ ಪೊಲೀಸರ ತಂಡ ಯಶಸ್ವಿಯಾಗಿದೆ. ಕೊಲೆ, ಕೊಲೆಯತ್ನ, ಹಣಕ್ಕಾಗಿ ಬೆದರಿಕೆ, ಸುಲಿಗೆ, ದರೋಡೆ, ಡ್ರಗ್ಸ್ ಸೇರಿ 37ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮುಂಬಯಿ ಪೊಲೀಸರಿಗೆ ಬೇಕಾಗಿದ್ದ ಗ್ಯಾಂಗ್ ಸ್ಟರ್ ಅಬ್ದುಲ್ ಅಝೀಜ್ ಖಾನ್ ಅಲಿಯಾಸ್ ಬಚ್ಚಖಾನ್ ನನ್ನು ಅತ್ತಿಬೆಲೆ ಪೊಲೀಸ್ ಇನ್ಸ್ಪೆಕ್ಟರ್ ಕೆ.ವಿಶ್ವನಾಥ್ ಮತ್ತವರ ತಂಡ ಬಂಧಿಸಿ ವಿಚಾರಣೆ ಕೈಗೊಂಡಿದೆ. ಆರೋಪಿಯಿಂದ ನಾಲ್ಕು ಜೀವಂತ ಬುಲೆಟ್ ಗಳು, ಒಂದು ಅತ್ಯಾಧುನಿಕ ಅಕ್ರಮ ಪಿಸ್ತೂಲ್, 15 ಸಿಮ್ ಕಾರ್ಡ್ ಹಾಗೂ 6 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಪರಾಧ ಪ್ರಕರಣಗಳ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗಲೇ ಅಬ್ದುಲ್ ಅಝೀಜ್ ಖಾನ್ ತಲೆಮರೆಸಿಕೊಂಡು ಮುಂಬಯಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ತಿಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಸುಕಿನ ವೇಳೆ ಅತ್ತಿಬೆಲೆ – ಟಿವಿಎಸ್ ಮುಖ್ಯರಸ್ತೆಯ ಖಾಸಗಿ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಅತ್ತಿಬೆಲೆ ಪೊಲೀಸರ ತಂಡ, ಲೋಡೆಡ್ ಗನ್ ಲೆಕ್ಕಿಸದೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ. ಗ್ಯಾಂಗ್ ಸ್ಟರ್ ಕೈಯಲ್ಲಿ ಜೀವಂತ ಬುಲೆಟ್ಗಳ ಪಿಸ್ತೂಲ್ ಇದ್ದರೂ, ಪೊಲೀಸ್ ಸಿಬ್ಬಂದಿ ಜೀವ ಪಣಕ್ಕಿಟ್ಟು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬಯಿಯ ಬುಕುಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಖ್ಯಾತ ವ್ಯಾಪಾರಸ್ಥ ಸಿಕಂದರ್ ರಾಜು ಲುಲದಿಯಾ ಎಂಬಾತನನ್ನು ಕಚೇರಿಗೆ ಕರೆಸಿ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಈತನನ್ನು ಬಂಧಿಸಿ ಮುಂಬೈ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ತಿಳಿಸಿದರು.



Join Whatsapp