ನವದೆಹಲಿ: ಡಿಸೆಂಬರ್ 2023 ರ ವೇಳೆಗೆ ದೇಶದ ಪ್ರತಿಯೊಂದು ಭಾಗಕ್ಕೂ ಅಲ್ಟ್ರಾ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವ 5 ಜಿ ಟೆಲಿಫೋನಿ ಸೇವೆಗಳನ್ನು ಜಾರಿಗೆ ತರುವ ಗುರಿಯನ್ನು ಹೊಂದಿದ್ದೇವೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಶನಿವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) ಕಾರ್ಯಕ್ರಮದಲ್ಲಿ 5ಜಿ ಸೇವೆಗಳಿಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಮುಕೇಶ್ ಅಂಬಾನಿ, ಜಿಯೋ ಕೈಗೆಟುಕುವ ಕಡಿಮೆ ದರದಲ್ಲಿ 5G ಸೇವೆಗಳನ್ನು ಪ್ರಾರಂಭಿಸುತ್ತದೆ. ಇನ್ನು ಒಂದು ವರ್ಷದಲ್ಲಿ ದೇಶದ ಮೂಲೆಮೂಲೆಗಳಿಗೂ 5ಜಿ ಸೇವೆ ತಲುಪಿಸುತ್ತೇವೆ ಎಂದು ಹೇಳಿದ್ದಾರೆ.
5G ಸೇವೆ ಮುಂದಿನ ಪೀಳಿಗೆಯ ಸಂಪರ್ಕ ತಂತ್ರಜ್ಞಾನಕ್ಕಿಂತ ಹೆಚ್ಚಾಗಿದೆ. 5G ತಂತ್ರಜ್ಞಾನವು ಇತರ 21 ನೇ ಶತಮಾನದ ತಂತ್ರಜ್ಞಾನಗಳಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್, ರೋಬೋಟಿಕ್ಸ್, ಬ್ಲಾಕ್‌ಚೈನ್ ಮತ್ತು ಮೆಟಾವರ್ಸ್ ನ್ನು ಅನ್ಲಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಶ್ಲಾಘಿಸಿದರು.