ಬಾಬರಿ ಮಸೀದಿ ಧ್ವಂಸಗೊಳಿಸಿದ್ದ ಪ್ರಾಯಶ್ಚಿತವಾಗಿ 91 ಮಸೀದಿ ಕಟ್ಟಿಸಿದ ಮುಹಮ್ಮದ್ ಅಮೀರ್ ನಿಗೂಢ ಸಾವು!

Prasthutha|

ಹೈದರಾಬಾದ್: ಬಾಬರಿ ಮಸೀದಿ ಧ್ವಂಸಗೊಳಿಸುವ ಕರಸೇವೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪಶ್ಚಾತ್ತಾಪಪಟ್ಟು ಇಸ್ಲಾಂಗೆ ಮತಾಂತರಗೊಂಡು 91 ಮಸೀದಿಗಳನ್ನು ನಿರ್ಮಿಸಿದ ಬಲ್ಬೀರ್ ಸಿಂಗ್ ಅಲಿಯಾಸ್ ಮುಹಮ್ಮದ್ ಅಮೀರ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

- Advertisement -

ಹಳೆಯ ಹೈದರಾಬಾದ್ ನಗರದ ಹಫೀಜ್ ಬಾಬಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಂಘಪರಿವಾರದ ಮಾಜಿ ಮುಖಂಡರೂ ಆಗಿದ್ದ ಮುಹಮ್ಮದ್ ಅಮೀರ್ ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಾಡಿಗೆ ಮನೆಯಲ್ಲಿ ತಂಗಿದ್ದರು. ಮನೆಯ ಒಳಗಿನಿಂದ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾಂಚನ್ ಬಾಗ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದಾಗ ಅಮೀರ್ ಅವರ ಮೃತದೇಹ ಪತ್ತೆಯಾಗಿದೆ.

ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. “ಮೃತಪಟ್ಟ ಅಮೀರ್ ಕುಟುಂಬಸ್ಥರು ದೂರು ನೀಡಿದರೆ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ತನಿಖೆ ನಡೆಸಲಾಗುವುದು” ಎಂದು ಕಾಂಚನ್‌ಬಾಗ್ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಜೆ.ವೆಂಕಟ್ ರೆಡ್ಡಿ ತಿಳಿಸಿದ್ದಾರೆ.

- Advertisement -

1993 ರಲ್ಲಿ ಇಸ್ಲಾಮ್ ಸ್ವೀಕರಿಸಿದ ಬಲ್ಬೀರ್ ಸಿಂಗ್ ತನ್ನ ಹೆಸರನ್ನು ಮುಹಮ್ಮದ್ ಅಮೀರ್ ಎಂದು ಬದಲಾಯಿಸಿದ್ದರು. ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿರುವುದಕ್ಕೆ ಪ್ರಾಯಶ್ಚಿತವಾಗಿ 100 ಮಸೀದಿಗಳನ್ನು ನಿರ್ಮಿಸುವುದಾಗಿ ಅಮೀರ್ ಪ್ರತಿಜ್ಞೆ ಮಾಡಿದ್ದರು.

Join Whatsapp