ನವದೆಹಲಿ: ದೇಶದೆಲ್ಲೆಡೆ ಓಮಿಕ್ರಾನ್ ಭೀತಿಯ ವಾತಾವರಣ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸುವಂತೆ ಪ್ರಧಾನಿ ಮೋದಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ಕಳೆದ ವರ್ಷ ಮೊದಲ ಕೋವಿಡ್ ಅಲೆಯ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧಗಳನ್ನು ವಿಳಂಬಗೊಳಿಸಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್, ಟ್ವೀಟ್ ಮೂಲಕ ತೀಕ್ಷ್ಣವಾದ ಪದಗಳಿಂದ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೋವಿಡ್ ನ ರೂಪಾಂತರಿಸಿದ ಹೊಸ ವೈರಸ್ ಕನಿಷ್ಠ 13 ದೇಶಗಳಲ್ಲಿ ಪತ್ತೆಯಾಗಿದ್ದು, ಜಾಗತಿಕವಾಗಿ ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಉಂಟು ಮಾಡುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಇಲಾಖೆ ಎಚ್ಚರಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣ ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣಕ್ಕೆ ನಿರ್ಬಂಧ ಹೇರುವಂತೆ ಅವರು ಒತ್ತಾಯಿಸಿದ್ದಾರೆ.
ಈ ನಡುವೆ ಹೊಸ ರೂಪಾಂತರವಾದ ಓಮಿಕ್ರಾನ್ ವೈರಸ್ ನ ಭೀತಿಯನ್ನು ಶಕ್ತವಾಗಿ ಎದುರಿಸಲು ಆಸ್ಪತ್ರೆಗಳನ್ನು ಸಜ್ಜುಗೊಳಿಸುವ ಬಗ್ಗೆ ಕೇಜ್ರಿವಾಲ್ ಮಹತ್ವದ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಭಾರತಕ್ಕೆ ಆಗಮಿಸುವ ಪ್ರತಿಯೊಬ್ಬರೂ ಕೂಡ ನೆಗೆಟಿವ್ RT-PCR ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಮಾತ್ರವಲ್ಲ ವೈರಸ್ ಪೀಡಿತ ರಾಷ್ಟ್ರಗಳಿಂದ ಆಗಮಿಸುವವರಿಗೆ ಕೆಲವು ಪ್ರವೇಶ ನಿಯಮಗಳನ್ನು ಘೋಷಿಸಿವೆ.