ಬೆಳಗಾವಿ: ಮಿಸ್ಟರ್ ಕುಮಾರಸ್ವಾಮಿ ನೀನು ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಗೆಲ್ಲಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಕುಮಾರಸ್ವಾಮಿ ಹೇಗಿದ್ದರೂ ಎಂಪಿಯಾಗುವುದಿಲ್ಲ. ಮಿಸ್ಟರ್ ಕುಮಾರಸ್ವಾಮಿ ಹೆದರಿ ಪಕ್ಕದ ಜಿಲ್ಲೆಗೆ ಹೋಗಿದ್ದೀಯ. ಚರ್ಚೆ ಮಾಡಲು ಸದನಕ್ಕೆ ಬಾ. ನೀನು ಎಂತ ಸುಳ್ಳುಗಾರ ಎಂಬುದು ಗೊತ್ತಾಗಲಿದೆ’ ಎಂದರು.
ನಾನು ಕಲ್ಲು ಲೂಟಿ ಮಾಡಿದೆನೋ, ಮೋಸ ಮಾಡಿದೆನೋ ಎಂಬ ಬಗ್ಗೆ ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಬರಲಿ ಎಂದು ಡಿಕೆ ಶಿವಕುಮಾರ್ ಸವಾಲು ಹಾಕಿದರು.
ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೆಚ್ಡಿಕೆ ಹೇಳಿದ್ದಾರೆ. ಇದನ್ನು ನಾವು ಖಂಡಿಸಬೇಕು. ನಾನು ಎಲ್ಲ ಮಹಿಳಾ ಸಂಘಟನೆಗಳಿಗೆ ಕರೆ ಕೊಡ್ತೇನೆ, ನಿಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಪ್ರತಿಭಟನೆ ಮಾಡಿ. ಪ್ರತಿಯೊಂದು ತಾಲೂಕಿನಲ್ಲಿ ಹೋರಾಟ ಮಾಡಬೇಕು. ಒಂದು ಪಕ್ಷದ ಅಧ್ಯಕ್ಷನಾಗಿ ನಾನು ಈ ಕರೆ ಕೊಡ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.