ಚಾಮರಾಜನಗರ: ಸರ್ಕಾರಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ಬಗ್ಗೆ ಈಗಾಗಲೇ ಅಸಮಾಧಾನ ವ್ಯಕ್ತವಾಗಿದೆ. ಕೇಸರಿ ಬಣ್ಣ ತ್ಯಾಗದ ಪ್ರತೀಕವಾಗಿದ್ದು, ಎಲ್ಲರೂ ಗೌರವ ಕೊಡುತ್ತಾರೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ತೆಗೆದುಕೊಂಡಿದ್ದು, ಇದರ ಅವಶ್ಯಕತೆ ಇರಲಿಲ್ಲ ಎಂದರು.
ಟಿಪ್ಪು ಪ್ರತಿಮೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಟಿಪ್ಪು ಜಯಂತಿಯನ್ನು ಸರ್ಕಾರದಿಂದ ಮಾಡಬಾರದು ಎಂದು ಈಗಾಗಲೇ ತೀರ್ಮಾನವಾಗಿದೆ. ಮುಸ್ಲಿಮರು ಪ್ರತಿಮೆ ನಿರ್ಮಿಸಿದರೂ, ಜಯಂತಿ ಆಚರಿಸಿದರೂ ಅಭ್ಯಂತರವಿಲ್ಲ. ಮುಸ್ಲಿಮರಲ್ಲಿ ಪ್ರತಿಮೆ ಸಂಸ್ಕೃತಿ, ವಿಗ್ರಹಾರಾಧನೆ ಇಲ್ಲದಿರುವುದರಿಂದ ಅವರು ಇನ್ನೊಮ್ಮೆ ಯೋಚನೆ ಮಾಡುವುದು ಒಳ್ಳೆಯದು. ಟಿಪ್ಪು ಪ್ರತಿಮೆಯನ್ನು ಅವರು ಸ್ವಂತಕ್ಕಾಗಿ ಮಾಡಿಕೊಂಡರೆ ಅದರಲ್ಲೇನೂ ತಪ್ಪಿಲ್ಲ. ತೊಂದರೆಯೂ ಇಲ್ಲ’ ಎಂದರು.