ಶಾಸಕ ಸ್ಥಾನ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಎಂ.ಪಿ. ಕುಮಾರಸ್ವಾಮಿ

Prasthutha|

►ಟಿಕೆಟ್ ಕೈತಪ್ಪಲು ಸಿ.ಟಿ.ರವಿ ಕಾರಣ

- Advertisement -


ಚಿಕ್ಕಮಗಳೂರು: ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡು ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ತಮ್ಮ ಶಾಸಕತ್ವಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.


ಮೂಡಿಗೆರೆ ಕ್ಷೇತ್ರಕ್ಕೆ ಈ ಬಾರಿ ದೀಪಕ್ ದೊಡ್ಡಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಇವರು ಸಿ.ಟಿ.ರವಿ ಆಪ್ತ ಎನ್ನಲಾಗಿದೆ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿರುವ ಅವರು ಅದನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು.
ಈ ನಡುವೆ ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಮತದಾರರಿಗೆ ಭಾವುಕ ಪತ್ರವೊಂದನ್ನು ಬರೆದಿದ್ದಾರೆ. ನಾನು ಮಾಡಿದ ಒಳ್ಳೆಯ ಕೆಲಸಗಳು ಹೈಕಮಾಂಡ್’ಗೆ ತಪ್ಪಾಗಿ ಕಂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -


ಆತ್ಮೀಯ ಕ್ಷೇತ್ರದ ಮತದಾರ ಬಂಧುಗಳೇ, ನಾನೆಂದು ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ, ಕ್ಷೇತ್ರದ ಎಲ್ಲಾ ಜಾತಿ, ಧರ್ಮದ ಪ್ರತಿಯೊಬ್ಬರನ್ನೂ ಸಮಾನವಾಗಿ ಕಂಡಿದ್ದು ಹೈಕಮಾಂಡ್ಗೆ ತಪ್ಪಾಗಿ ಕಂಡಿದ್ದು ಪರಮಾಶ್ಚರ್ಯ ….!!?
ಸರ್ವೇ ಆಧರಿಸಿ ಟಿಕೆಟ್ ನೀಡುವ ಪಕ್ಷ ಪ್ರತಿ ಸರ್ವೆಯಲ್ಲಿ ಮುನ್ನಡೆಯಿದ್ದರೂ ಟಿಕೆಟ್ ನಿರಾಕರಿಸಿದ್ದು ನೋವಿನ ವಿಚಾರ.
ಮಳೆಯಿಂದಾಗಿ ಬೆಳೆ ಕಳೆದುಕೊಂಡ ಕ್ಷೇತ್ರದ ರೈತ ಬಾಂಧವರಿಗೋಸ್ಕರ ವಿಧಾನ ಸೌಧದ ಗಾಂಧಿ ಪ್ರತಿಮೆ ಮುಂದೆ ಏಕಾಂಗಿಯಾಗಿ ಧರಣಿ ಕುಳಿತಿದ್ದು ಹೈಕಮಾಂಡ್’ಗೆ ತಪ್ಪು ಅನ್ನಿಸಿದ್ದು ಇನ್ನೂ ಪರಮಾಶ್ಚರ್ಯ….!!


ನಿಮಗೆಲ್ಲಾ ತಳಿದಿರುವಂತೆ ಶತ್ರುಗಳಿಗೂ ಕೂಡ ಕೇಡು ಬಯಸದೇ ಎಲ್ಲರನ್ನು ಸದಾ ಗೌರವಿಸುತ್ತಾ ಪ್ರೀತಿಯಿಂದ ಕಾಣುತ್ತಲೇ ಬಂದೆ.. ಪಕ್ಷದ ಕಾರ್ಯಕರ್ತರನ್ನು ಬೆಳೆಸಿದ್ದೇನೆ ಹೊರತು ನನ್ನ ಮನೆಯವರನ್ನಲ್ಲ. ಯೋಚಿಸುವ ಶಕ್ತಿ ನಿಮ್ಮಲ್ಲಿದೆ. ನನಗೆ ಶಕ್ತಿ ತುಂಬುವ ಕೈಗಳು ನೀವು. ಇನ್ನು ಮುಂದೆಯೂ ನಿಮ್ಮೊಂದಿಗೆ ಸದಾ ಜೊತೆಯಲ್ಲಿರುತ್ತೇನೆ ..
ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮೇಲಿರುತ್ತದೆ ಎಂಬ ನಂಬಿಕೆ ನನಗಿದೆ.
–ಧನ್ಯವಾದಗಳು, ಎಂಪಿ ಕುಮಾರಸ್ವಾಮಿ



Join Whatsapp