ಮೈಸೂರು: ಅಯೋಧ್ಯೆ ರಾಮಲಲ್ಲಾ ವಿಗ್ರಹ ಕೆತ್ತನೆಗೆ ಶಿಲೆ ಸಿಕ್ಕ ಸ್ಥಳದಲ್ಲಿ ಶ್ರೀ ರಾಮನ ಪೂಜೆಗೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ ಅವರಿಗೆ ಸ್ಥಳೀಯ ಗ್ರಾಮಸ್ಥರು ಮತ್ತು ದಲಿತರು ಘೇರಾವ್ ಮಾಡಿದ್ದಾರೆ.
ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಬಾಲರಾಮನ ಮೂರ್ತಿ ಕೆತ್ತನೆಗೆ ಬಳಸಿರುವ ಕೃಷ್ಣಶಿಲೆ ದೊರೆತ ಹಾರೋಹಳ್ಳಿ ಗ್ರಾಮದಲ್ಲಿ ಪೂಜಾ ಕೈಂಕರ್ಯ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಸದ ಪ್ರತಾಪ್ ಸಿಂಹ ತೆರಳಿದ್ದರು. ಈ ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಇಂದು ಬೆಳಗ್ಗೆ ಆಗಮಿಸುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು ಮತ್ತು ದಲಿತ ಮುಖಂಡರು ಜಮೀನಿನ ಬಳಿಯೇ ತಡೆದು ಘೇರಾವ್ ಮಾಡಿ “ಗೋ ಬ್ಯಾಕ್ ಪ್ರತಾಪ್ ಸಿಂಹ’, ‘ದಲಿತ ವಿರೋಧಿ ಪ್ರತಾಪ್ ಸಿಂಹನಿಗೆ ಧಿಕ್ಕಾರ’.. ಇತ್ಯಾದಿ ಘೋಷಣೆಗಳನ್ನು ಕೂಗಿದರು.
ಸಂಸದ ಪ್ರತಾಪ್ ಸಿಂಹ ದಲಿತ ವಿರೋಧಿಯಾಗಿದ್ದು, ಕಳೆದ 10 ವರ್ಷದಿಂದ ಒಮ್ಮೆಯೂ ನಮ್ಮೂರಿಗೆ ಬಂದಿಲ್ಲ. ನಮ್ಮ ಸಮಸ್ಯೆ ಏನು ಅಂತ ಕೇಳಿಲ್ಲ. ಪ್ರತಾಪ್ ಸಿಂಹ ಪೂಜೆಯಲ್ಲಿ ಭಾಗವಹಿಸೋದು ನಮಗೆ ಇಷ್ಟ ಇಲ್ಲ.ಆದ್ದರಿಂದ ವಾಪಸ್ ಕಳುಹಿಸಿದ್ದೇವೆ ಎಂದು ಹಾರೋಹಳ್ಳಿ ಗ್ರಾಮದ ಯಜಮಾನ ಚೆಲುವರಾಜು ಹೇಳಿದರು.
ಈ ವೇಳೆ ಸ್ಥಳದಲ್ಲಿದ್ದ ಶಾಸಕ ಜಿಟಿ ದೇವೇಗೌಡ, ಪರಿಷತ್ ಸದಸ್ಯ ಸಿಎನ್ ಮಂಜೇಗೌಡ, ಮಾಜಿ ಶಾಸಕ ಸಾ ರಾ ಮಹೇಶ್ ಅವರುಗಳು ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು, ದಲಿತ ಸಮುದಾಯ ಮುಖಂಡರು ಪಟ್ಟುಬಿಡಲಿಲ್ಲ. ಹೀಗಾಗಿ ಸಂಸದ ಪ್ರತಾಪ್ ಸಿಂಹ ಬೇಸರದಿಂದ ಹೊರ ನಡೆದರು.