ಜನಪರ ಹೊರಾಟವನ್ನು ಫ್ರೀಡಂ ಪಾರ್ಕ್ ನಿಂದ ರೇಸ್ ಕೋರ್ಸ್ ಗೆ ಸ್ಥಳಾಂತರಿಸಿ: ಫ್ರೀಡಂ ಪಾರ್ಕ್ ಉಳಿಸಿ ಹೋರಾಟ ಸಮಿತಿ ಒತ್ತಾಯ

Prasthutha|

ಬೆಂಗಳೂರು: ರಾಜ್ಯದ ಎಲ್ಲಾ ಹೋರಾಟಗಳ ಕೇಂದ್ರ ಬಿಂದುವಾಗಿರುವ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ದಿನದಿಂದ ದಿನಕ್ಕೆ ಮೂಲಭೂತ ಸೌಕರ್ಯದ ಸಮಸ್ಯೆಗಳು ಬಿಗಡಾಯಿಸುತ್ತಿದ್ದು, ಹೋರಾಟವನ್ನು ರೇಸ್ ಕೋರ್ಸ್ ತೆರವುಗೊಳಿಸಿ, ಇಲ್ಲಿ ಹೋರಾಟಕ್ಕೆ ಅವಕಾಶ ಕಲ್ಪಿಸಿದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಸ್ವತಂತ್ರ್ಯ ಉದ್ಯಾನ ಉಳಿಸಿ ಹೋರಾಟ ಸಮಿತಿ ಬಲವಾಗಿ ಪ್ರತಿಪಾದಿಸಿದೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವತಂತ್ರ್ಯ ಉದ್ಯಾನ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ನಗರದ ಕೇಂದ್ರ ಭಾಗದಲ್ಲಿರುವ ರೇಸ್ ಕೋರ್ಸ್ ಇದೀಗ ಬಹುತೇಕ ತನ್ನ ಚಟುವಟಿಕೆಯನ್ನು ಸ್ಥಗಿತಗೊಳಿಸಿದೆ. ಹೃದಯ ಭಾಗದ ಈ ಸ್ಥಳದಲ್ಲಿ ಜನಪರ ಹೋರಾಟಕ್ಕೆ ಅವಕಾಶ ಮಾಡಿಕೊಟ್ಟರೆ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರಕ್ಕೆ ಸಾಧ್ಯವಾಗಲಿದೆ ಎಂದರು.

ಏಷ್ಯಾದಲ್ಲಿಯೇ ಅತ್ಯಂತ ವಿನೂತನವಾಗಿರುವ ಬಸ್ ಹಾಗೂ ರೈಲ್ವೆ ನಿಲ್ದಾಣ ಒಂದೆ ಕಡೆ ಇದ್ದು, ರಾಜ್ಯದ ಎಲ್ಲಾ ಭಾಗಗಳಿಗೂ ಈ ಪ್ರದೇಶ ಸಂಪರ್ಕ ಕಲ್ಪಿಸುತ್ತದೆ. ಜನಪರ ಸಮಸ್ಯೆಗಳ ಪರಿಹಾರಕ್ಕಾಗಿ ಶಕ್ತಿ ಸೌಧವಾಗಿರುವ ವಿಧಾನಸೌಧಕ್ಕೆ ಮನವಿ ಸಲ್ಲಿಸಲು ರೇಸ್ ಕೋರ್ಸ್ ಅತ್ಯಂತ ಸನಿಹದಲ್ಲಿದೆ. ಜನರ ಅಹವಾಲುಗಳಿಗೆ ಕಿವಿಗೊಡಲು ಸರ್ಕಾರಕ್ಕೆ ಇದಕ್ಕಿಂತ ಉತ್ತಮ ಸ್ಥಳ ಮತ್ತೊಂದಿಲ್ಲ. ಇದರಿಂದ ಸಂಚಾರಿ ಒತ್ತಡದ ಕಿರಿ ಕಿರಿ ತಗ್ಗಿಸಬಹುದು. ಫ್ರೀಡಂ ಪಾರ್ಕ್ ಸುತ್ತಮತ್ತ ಹೋರಾಟಗಾರರ ವಾಹನಗಳ ನಿಲುಗಡೆಯಂತಹ ಸಮಸ್ಯೆಗಳಿಗೂ ಇದರಿಂದ ಪರಿಹಾರ ದೊರೆಯಲಿದೆ. ಜೊತೆಗೆ ಬೆಂಗಳೂರಿನ ಜನ ಕಚೇರಿಗಳಿಗೆ, ತಮ್ಮ ದೈನಂದಿನ ಒಡಾಟಕ್ಕೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ರೇಸ್ ಕೋರ್ಸ್ ಒಳಗಡೆ ಹೋರಾಟ ಮಾಡಿದರೆ ಫ್ರೀಡಂ ಪಾರ್ಕ್ ಸುತ್ತಮುತ್ತ ಅಧ್ಯಯನ ಮಾಡುತ್ತಿರುವ 4 ರಿಂದ 5 ಸಾವಿರ ವಿದ್ಯಾರ್ಥಿಗಳಿಗೆ ಶಬ್ಧ ಮಾಲೀನ್ಯದಿಂದ ಮುಕ್ತಿ ದೊರೆಯಲಿದೆ ಎಂದು ಹೇಳಿದರು.

- Advertisement -

ಫ್ರೀಡಂ ಪಾರ್ಕ್ ನಲ್ಲೇ ಹೋರಾಟ ಮಾಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದ್ದು, ಸರ್ಕಾರವೇ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿ ರೇಸ್ ಕೋರ್ಸ್ ನಲ್ಲಿ ಹೋರಾಟಕ್ಕೆ ಅವಕಾಶ ಮಾಡಿಕೊಡುತ್ತಿರುವುದಾಗಿ ತಿಳಿಸಬೇಕು. ಈಗಾಗಲೇ ಇಲ್ಲಿನ ಸುತ್ತಮುತ್ತ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಫ್ರೀಡಂ ಪಾರ್ಕ್ ನಲ್ಲಿನ ಪ್ರತಿಭಟನೆಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿವೆ. ಯಾವುದೇ ಹೋರಾಟವನ್ನು ಹತ್ತಿಕ್ಕಬಾರದು, ಹಾಗೆಯೇ ಹೋರಾಟದಿಂದ ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೂ ತೊಂದರೆಯಾಗಬಾರದು ಎಂಬುದು ನಮ್ಮ ನಿಲುವಾಗಿದೆ. ಹೀಗಾಗಿ ರೇಸ್ ಕೋರ್ಸ್ ಗೆ ಹೋರಾಟವನ್ನು ಸ್ಥಳಾಂತರಿಸದೇ ಬೇರೆ ಮಾರ್ಗವಿಲ್ಲ ಎಂದರು.

ಫ್ರೀಡಂ ಪಾರ್ಕ್ ನಲ್ಲಿ ಒಟ್ಟು 22 ಎಕರೆ ಪ್ರದೇಶವಿದ್ದು, ಎರಡು ಎಕರೆ ಪ್ರತಿಭಟನೆಗೆ ಮೀಸಲಾಗಿದೆ. ಇಲ್ಲಿ ಪ್ರತಿದಿನ 7 ರಿಂದ 10 ಪ್ರತಿಭಟನೆಗಳು ನಡೆಯುತ್ತಿವೆ. 4 ರಿಂದ 10 ಸಾವಿರ ಹೋರಾಟಗಾರರು ಫ್ರೀಡಂ ಪಾರ್ಕ್ ಗೆ ಬರುತ್ತಿದ್ದಾರೆ. ಆದರೆ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಶೌಚಾಲಯ, ವಿದ್ಯುತ್ ಸೌಲಭ್ಯವೂ ಇಲ್ಲ. ನಾಗರಿಕ ಸಮಸ್ಯೆಗಳಿಗೆ ಬಿಬಿಎಂಪಿಯಿಂದ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ಮೊಬೈಲ್ ಶೌಚಾಲಯ ನೀಡುವಂತೆ ಮಾಡಿದ ಮನವಿಗೆ ಬಿಬಿಎಂಪಿ ಕವಡೆ ಕಿಮ್ಮತ್ತು ನೀಡಿಲ್ಲ. ಈಗಾಗಲೇ ಇಲ್ಲಿ ಶೌಚಾಲಯ ದುರ್ನಾತ ಬೀರುತ್ತಿದೆ. ಫ್ರೀಡಂ ಪಾರ್ಕ್ ನಲ್ಲಿ 9 ಸಾವಿರಕ್ಕೂ ಹೆಚ್ಚು ಮರ, ಗಿಡಗಳಿದ್ದು, ಹಿರಿಯ ನಾಗರಿಕರ ವಾಯುವಿಹಾರದ ಕೇಂದ್ರವಾಗಿದೆ ಎಂದರು.

ಫ್ರೀಡಂ ಪಾರ್ಕ್ ಪಕ್ಕದಲ್ಲೇ ಬೌದ್ಧ ವಿಹಾರ ಇದ್ದು, ಭೌದ್ಧ ಬಿಕ್ಕುಗಳ ಪ್ರಾರ್ಥನೆಗೂ ತೊಂದರೆಯಾಗಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳನ್ನು ತನ್ನ ಆದೇಶವನ್ನು ಪರಿಷ್ಕರಿಸುವಂತೆ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಿವೆ. ಆದರೆ ಸರ್ಕಾರ ಇದನ್ನು ನೆಪಮಾಡಿಕೊಂಡು ಹೋರಾಟವನ್ನು ಬೆಂಗಳೂರಿನ ಹೊರ ಭಾಗಕ್ಕೆ ಸ್ಥಳಾಂತರಿಸಬಾರದು ಎನ್ನುವ ಕಾರಣಕ್ಕೆ ರೇಸ್ ಕೋರ್ಸ್ ಜಾಗವನ್ನು ಮುಂದಾಗಿಯೇ ಕೇಳುತ್ತಿದ್ದೇವೆ. ಫ್ರೀಡಂ ಪಾರ್ಕ್ ಹೋರಾಟಗಾರರ ಕರ್ಮ ಭೂಮಿ. ಹೋರಾಟಕ್ಕೆ ರೇಸ್ ಕೋರ್ಸ್ ಗಿಂತ ಉತ್ತಮ ಸ್ಥಳ ಮತ್ತೊಂದಿಲ್ಲ. ಶಕ್ತಿ ಸೌಧಕ್ಕೆ ಹತ್ತಿರುವ ಏಕೈಕ ಜಾಗ ರೇಸ್ ಕೋರ್ಸ್ ಎಂದು ಗಂಡಸಿ ಸದಾನಂದ ಸ್ವಾಮಿ ಬಲವಾಗಿ ಪ್ರತಿಪಾದಿಸಿದ್ದಾರೆ.

ರೇಸ್ ಕೋರ್ಸ್ ಸ್ಥಳಾಂತರ ಮಾಡುವಂತೆ ಹಲವಾರು ದಶಕಗಳಿಂದ ಕೂಗು ಕೇಳಿ ಬಂದಿದೆ. ಕುದುರೆ ಜೂಜನ್ನು ನಗರದ ಹೊರ ಭಾಗಕ್ಕೆ ಸ್ಥಳಾಂತರ ಮಾಡುವ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿದೆ. ಇದಕ್ಕಾಗಿ ಸರ್ಕಾರ ಜಾಗ, ಸೌಲಭ್ಯವನ್ನು ಕಲ್ಪಿಸಿದೆ. ರೇಸ್ ಕೋರ್ಸ್ ಭೂಮಿ ಯಾವುದೇ ಕಂಪೆನಿ, ಭೂಗಳ್ಳರ ಪಾಲಾಗುವುದನ್ನು ತಪ್ಪಿಸಲು ಸರ್ಕಾರ ಜನಪರ ಹೋರಾಟಕ್ಕೆ ಕಲ್ಪಿಸಬೇಕು ಎಂದು ಹೇಳಿದ್ದಾರೆ.



Join Whatsapp