ಅವಳಿ ಮಕ್ಕಳನ್ನು ಬಾವಿಗೆ ಎಸೆದು ಆತ್ಮಹತ್ಯೆಗೆ ಯತ್ನಿಸಿದ ತಾಯಿ : ಮಕ್ಕಳು ಮೃತ್ಯು

Prasthutha|

ಕೋಝಿಕ್ಕೋಡ್: ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿಯೊಬ್ಬರು ತನ್ನ ಅವಳಿ ಮಕ್ಕಳನ್ನು ಬಾವಿಗೆ ತಳ್ಳಿ ಬಳಿಕ ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೇರಳದ ಕೋಝಿಕ್ಕೋಡಿನ ನಾದಾಪುರಂ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ 3 ವರ್ಷ ಪ್ರಾಯದ ಇಬ್ಬರು ಅವಳಿ ಮಕ್ಕಳಾದ ಫಾತಿಮಾ ನೌಶಾ ಹಾಗೂ ಮಹಮ್ಮದ್ ರಿಝ್ವಾನ್ ಸಾವನ್ನಪ್ಪಿದ್ದಾರೆ. ತಾಯಿಯನ್ನು ರಕ್ಷಿಸಲಾಗಿದೆ. ನಾದಾಪುರಂನ ಪೇರೋಡ್ ನಿವಾಸಿ ಸುಬೀನಾ (31) ತನ್ನ ಅವಳಿ ಮಕ್ಕಳೊಂದಿಗೆ ಭಾನುವಾರ ರಾತ್ರಿ ಬಾವಿಗೆ ಹಾರಿದ್ದರು. ದುರದೃಷ್ಟವಶಾತ್ ಮಕ್ಕಳಿಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

- Advertisement -

ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಬಳಿಕ ಸುಬೀನಾ, ಕುಟುಂಬದವರಿಗೆ ದೂರವಾಣಿ ಕರೆ ಮಾಡಿ ತನ್ನ ಕೃತ್ಯದ ಬಗ್ಗೆ ತಿಳಿಸಿದ್ದಳು. ಬಳಿಕ ತಾನೂ ಬಾವಿಗೆ ಹಾರಿದ್ದಳು. ಆಕೆಯ ಕುಟುಂಬಸ್ಥರು ಕೂಡಲೇ ಸ್ಥಳೀಯರಿಗೆ ವಿಷಯ ಮುಟ್ಟಿಸಿದ ಕಾರಣ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಸುಬೀನಾ, ಬಾವಿಯಲ್ಲಿದ್ದ ಮೋಟಾರ್ ಪಂಪ್’ ಅನ್ನು ಹಿಡಿದು ಜೀವ ಉಳಿಸಿಕೊಂಡಿದ್ದಾಳೆ.

ಮಂಜಾಪುರಂ ನಿವಾಸಿ ರಫೀಕ್’ರನ್ನು ಸುಬೀನಾ ವಿವಾಹವಾಗಿದ್ದರು. ಸುಬೀನಾಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿದ್ದ ಆಕೆಯನ್ನು ನಾದಾಪುರಂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.



Join Whatsapp