ದತ್ತು ಮಗನ ಕತ್ತು ಹಿಸುಕಿ ಕೊಲೆಗೈದ ತಾಯಿ: ಮಗ ನಾಪತ್ತೆ ಎಂದು ನಾಟಕವಾಡಿದ್ದ ಮಹಿಳೆ

Prasthutha|

ಬಾಗಲಕೋಟೆ: ಆಸ್ತಿಯನ್ನು ಕೇಳಿದ ಕಾರಣದಿಂದ ಆಕ್ರೋಶಗೊಂಡ ತಾಯಿಯೊಬ್ಬರು, ದತ್ತು ಮಗನ ಎದೆ ಮೇಲೆ ಕಲ್ಲು ಎತ್ತಿ ಹಾಕಿ, ಕತ್ತು ಹಿಸುಕಿ ಕೊಲೆಗೈದ ದಾರುಣ ಘಟನೆ ಮುಧೋಳ ತಾಲೂಕಿನ ನಾಗಣಾಪುರದಲ್ಲಿ ನಡೆದಿದೆ.

- Advertisement -

ಮೃತ ದತ್ತು ಮಗನನ್ನು ವಸಂತ ಮಾಲಿಂಗಪ್ಪ ಕುರಬಳ್ಳಿ(24) ಎಂದು ಗುರುತಿಸಲಾಗಿದೆ.

ಮೊದಲು ತಾಯಿ ನನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಸಂಬಂಧ ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.

- Advertisement -

ದತ್ತು ಮಗ ವಸಂತ ಶವವಾಗಿ ಚೀಲದಲ್ಲಿ ಪತ್ತೆಯಾಗಿದ್ದ. ಕೂಡಲೇ ಪೊಲೀಸರು ತಾಯಿಯನ್ನು ವಿಚಾರಣೆ ನಡೆಸಿದಾಗ  ಆಕೆ ಅನೈತಿಕ ಸಂಬಂಧಕ್ಕೆ ಅಡ್ಡಿ ಹಾಗೂ ಆಸ್ತಿ ಕೇಳಿದ್ದಕ್ಕೆ ಅಳಿಯಂದಿರು, ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿರುವುದಾಗಿ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಜೂ. 19 ರಂದು ಮುಂಜಾನೆ 4 ಗಂಟೆಗೆ ತಾಯಿ ಕಮಲವ್ವ, ಅಳಿಯಂದಿರಾದ ಭೀಮಪ್ಪ ಮಳಲಿ, ಸಿಂಧೂರ ಬೀರಣ್ಣ ಹಾಗೂ ಪ್ರಿಯಕರ ನಿಂಗಪ್ಪ ಸೇರಿ ವಸಂತನ ಎದೆ ಮೇಲೆ ಕಲ್ಲು ಎತ್ತಿ ಹಾಕಿ ನಂತರ ಕತ್ತು ಹಾಗೂ ಮರ್ಮಾಂಗವನ್ನು ಹಿಸುಕಿ ಬರ್ಬರವಾಗಿ ಕೊಲೆ ಮಾಡಿ ಶವವನ್ನು ಚೀಲದಲ್ಲಿ ತುಂಬಿದ್ದಾರೆ. ಚೀಲವನ್ನು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಾಳ ಸೀಮೆಯ ಕಾಲುವೆಯಲ್ಲಿ ಬಿಸಾಕಿದ್ದರು.

ಇತ್ತ ಜುಲೈ 6 ರಂದು ತಾಯಿ ಕಮಲವ್ವ, ತನ್ನ ಮಗ ನಾಪತ್ತೆಯಾದ್ದಾನೆ ಎಂದು ಲೋಕಾಪುರ ಠಾಣೆಯಲ್ಲಿ ದೂರು ನೀಡಿದ್ದರು.

ಪೊಲೀಸ್ ತನಿಖೆ ವೇಳೆ ತಾಯಿ ಹಾಗೂ ಅಳಿಯಂದಿರ ಬಣ್ಣ ಬಯಲಾಗಿದೆ. ಮಗಳ ಮಾವನ(ಮಗಳ ಗಂಡನ ತಂದೆ) ನಿಂಗಪ್ಪ ಜೊತೆಗೆ ಕಮಲವ್ವ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇದಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

 ಸದ್ಯ ಆರೋಪಿಗಳನ್ನು ಲೋಕಾಪುರ ಠಾಣೆ ಪೊಲೀಸರು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Join Whatsapp