ರಾಂಚಿ: “ಅವನು ನನ್ನ ಏಕೈಕ ಮಗ. ಅವನನ್ನು ನನ್ನಿಂದ ಕಸಿದುಕೊಳ್ಳಲಾಯಿತು” ಎಂದು ರಾಂಚಿಯಲ್ಲಿ ಪೊಲೀಸರ ಗುಂಡೇಟಿಗೆ ಮೃತಪಟ್ಟ ಮುದಸ್ಸಿರ್ ಅವರ ದುಃಖತಪ್ತ ತಾಯಿ ಹೇಳಿದರು.
ಪುತ್ರ ಮುದಸ್ಸಿರ್ ನೊಂದಿಗೆ ಮೊಬೈಲ್ ನಲ್ಲಿ ಕೊನೆಯದಾಗಿ ಮಾತನಾಡಿದ್ದನ್ನು ತಾಯಿ ನೆನಪಿಸಿಕೊಳ್ಳುತ್ತಾ ಕಣ್ಣೀರಾದರು.
“ನಾನು ಅವನೊಂದಿಗೆ ಮಾತನಾಡುತ್ತಿದ್ದೆ. ಆತ ‘ಮಮ್ಮಿ ದಯವಿಟ್ಟು ಕರೆಯನ್ನು ಕಟ್ ಮಾಡಿ, ನಾನು ಇಲ್ಲಿಂದ ಹೊರಬರುತ್ತಿದ್ದೇನೆ’ ಎಂದು ಹೇಳಿದ್ದ. ಸ್ವಲ್ಪ ಸಮಯದಲ್ಲೇ ಅವನ ಸ್ನೇಹಿತನೊಬ್ಬ ನನಗೆ ಕರೆ ಮಾಡಿ, ಮಗನಿಗೆ ಗುಂಡು ತಗುಲಿದ ವಿಷಯ ತಿಳಿಸಿದ” ಎಂದು ಮುದಸ್ಸಿರ್ ತಾಯಿ ಶುಕ್ರವಾರದ ಘಟನೆಯನ್ನು ವಿವರಿಸಿದರು.
ನನ್ನ ಮಗನಿಗೆ ಯಾಕಾಗಿ ಗುಂಡು ಹಾರಿಸಲಾಯಿತು. ಯಾರು ಗುಂಡು ಹೊಡೆದರು. ಆತನ ಸಾವಿಗೆ ಯಾರು ಹೊಣೆ ಎಂದು ತಾಯಿ ಪ್ರಶ್ನಿಸಿದರು.
ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಶುಕ್ರವಾರ ಜಾರ್ಖಂಡ್ ನ ರಾಂಚಿಯಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬಳಿಕ ಪೊಲೀಸರು ಹಾರಿಸಿದ ಗುಂಡಿಗೆ 16 ವರ್ಷ ಪ್ರಾಯದ ಇಬ್ಬರು ಬಾಲಕರು ಮೃತಪಟ್ಟಿದ್ದರು.