ಮಹಿಳೆಯನ್ನು ಥಳಿಸಿ ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಪತಿ ಮತ್ತು ಅತ್ತೆ; ವಿಡಿಯೋ ವೈರಲ್

Prasthutha|

ಜೈಪುರ: ಮಹಿಳೆಯೊಬ್ಬರನ್ನು ಆಕೆಯ ಪತಿ ಮತ್ತು ಆತನ ಕುಟುಂಬ ಸದಸ್ಯರು ಸಾರ್ವಜನಿಕವಾಗಿ ಥಳಿಸಿ ವಿವಸ್ತ್ರಗೊಳಿಸಿದ ಘಟನೆ ರಾಜಸ್ಥಾನದ ಪ್ರತಾಪ್‌ಗಢ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಸೋಮವಾರ ನಡೆದ ಘಟನೆ ಇದಾಗಿದೆ ಎಂದು ಹೇಳಲಾಗುತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಆರೋಪಿಗಳನ್ನು ಶೀಘ್ರವೇ ಬಂಧಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದರು.

ಕಳೆದ ವರ್ಷ ವಿವಾಹವಾಗಿದ್ದ ಮಹಿಳೆ, ನೆರೆಹೊರೆಯ ಪುರುಷನೊಂದಿಗೆ ಓಡಿಹೋಗಿದ್ದಾಳೆ ಎಂದು ಆರೋಪಿಸಿ ಆಕೆಯ ಪತಿ ಮತ್ತು ಅತ್ತೆ ಥಳಿಸಿದ್ದಾರೆ. ಅಷ್ಟೇ ಅಲ್ಲದೆ, ಆಕೆಯನ್ನು ವಿವಸ್ತ್ರಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ತನಿಖೆಗಾಗಿ ಆರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

- Advertisement -

ಈ ಬಗ್ಗೆ ಟ್ವೀಟ್‌ ಮಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪ್ರತಾಪಗಢ ಜಿಲ್ಲೆಯಲ್ಲಿ ಪತಿ ಮತ್ತು ಅತ್ತೆ-ಮಾವನ ನಡುವಿನ ಕೌಟುಂಬಿಕ ಕಲಹದಲ್ಲಿ ಮಹಿಳೆಯನ್ನು ಆಕೆಯ ಅತ್ತೆ-ಮಾವ ಬೆತ್ತಲೆಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಗರಿಕ ಸಮಾಜದಲ್ಲಿ ಇಂತಹ ಅಪರಾಧಿಗಳಿಗೆ ಸ್ಥಳವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದರು.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕಿ ವಸುಂಧರಾ ರಾಜೆ, ಮಹಿಳೆಯರ ವಿರುದ್ಧದ ಅಪರಾಧಗಳು ರಾಜ್ಯದಲ್ಲಿ ಎಷ್ಟು ಹರಡಿವೆಯೆಂದರೆ ರಾಜಸ್ಥಾನವು ದಿನದಿಂದ ದಿನಕ್ಕೆ ನಾಚಿಕೆಪಡಬೇಕಾಗಿದೆ. ಮಹಿಳಾ ದೌರ್ಜನ್ಯದಲ್ಲಿ ರಾಜ್ಯವನ್ನು ದೇಶದಲ್ಲಿಯೇ ನಂಬರ್ ಒನ್ ಮಾಡಲು ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದೆ. ರಾಜಸ್ಥಾನದಲ್ಲಿ ಹೆಣ್ಣುಮಕ್ಕಳ ಲೂಟಿ ಮತ್ತು ಕಿರುಚಾಟವನ್ನು ನಿಮ್ಮ ಕಾಂಗ್ರೆಸ್ ಸರ್ಕಾರ ಕೇಳದಿರುವುದು ಯಾಕೆ ಎಂದು ಅಶೋಕ್ ಗೆಹ್ಲೋಟ್ ಅವರನ್ನು ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ವಿಡಿಯೋವನ್ನು ಹಂಚಿಕೊಳ್ಳದಂತೆ ಪ್ರತಾಪಗಢ ಪೊಲೀಸರು ಮನವಿ ಮಾಡಿದ್ದಾರೆ.

ಘಟನೆ ಸಂಬಂಧ ಮಾಹಿತಿ ತಿಳಿದ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್, ಪ್ರತಾಪಗಢದ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಡಿಜಿಪಿ ಉಮೇಶ್ ಮಿಶ್ರಾ ನಿರ್ದೇಶನ ನೀಡಿದ್ದಾರೆ.