ವರದಕ್ಷಿಣೆ ಕಿರುಕುಳ ಆರೋಪ: ಮಗುವಿನೊಂದಿಗೆ ತಾಯಿ ಆತ್ಮಹತ್ಯೆ

Prasthutha|

ಹಾಸನ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಮಗುವಿನೊಂದಿಗೆ ತಾಯಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚೇವುಕೊಪ್ಪಲು ಗ್ರಾಮದಲ್ಲಿ ನಡೆದಿದೆ.

- Advertisement -

ಮೃತರನ್ನು ಭವ್ಯ (23), ವೇದಾಂತ್ (3) ಎಂದು ಗುರುತಿಸಲಾಗಿದೆ.

ಕಳೆದ ನ.19 ರಂದು ಭವ್ಯ, ಮಗನ ಜೊತೆ ಪತಿಯ ಮನೆಯಿಂದ ತೆರಳಿದ್ದು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಚನ್ನರಾಯಪಟ್ಟಣ ತಾಲೂಕಿನ ಗೆಜ್ಜಗಾರನಹಳ್ಳಿ ಬಳಿಯ ನಾಲೆಯಲ್ಲಿ ಮಗುವಿನ ಶವ ದೊರೆತರೆ, ಭವ್ಯ ಶವ ದೊಡ್ಡಕುಂಚೇವು ಗ್ರಾಮದ ಬಳಿಯ ಕೆರೆಯಲ್ಲಿ ಸಿಕ್ಕಿದೆ.

- Advertisement -


ಪತಿ ಶ್ರೀನಿವಾಸ್ ಹಾಗೂ ಅತ್ತೆ ಅಕ್ಕಯಮ್ಮನ ವಿರುದ್ಧ ಮೃತರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಗೆಜ್ಜಗಾರನಹಳ್ಳಿ ಗ್ರಾಮದ ಭವ್ಯಾಳನ್ನು ದೊಡ್ಡಕುಂಚೇವುಕೊಪ್ಪಲು ಗ್ರಾಮದ ಶ್ರೀನಿವಾಸ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಭವ್ಯ ಚೆನ್ನಾಗಿದ್ದ ಕಾರಣ ಶ್ರೀನಿವಾಸ್ ಮನೆಯವರು ವರದಕ್ಷಿಣೆ ಬೇಡ ಎಂದಿದ್ದರು. ಶ್ರೀನಿವಾಸ್ ಟ್ರ್ಯಾಕ್ಟರ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ. ಮದುವೆಯಾದ ಆರಂಭದಲ್ಲಿ ಗಂಡ, ಹೆಂಡತಿ ಅನ್ಯೋನ್ಯವಾಗಿದ್ದರು. ದಂಪತಿಗೆ ಒಂದು ಗಂಡು ಮಗುವಿತ್ತು. ಹೀಗಿರುವಾಗ ಶ್ರೀನಿವಾಸ್ ಹಾಗೂ ಆತನ ತಾಯಿ ಅಕ್ಕಯಮ್ಮ ವರದಕ್ಷಿಣೆ ಹಣ ತರುವಂತೆ ಭವ್ಯಳಿಗೆ ಕಿರುಕುಳ ಕೊಡಲು ಆರಂಭಿಸಿದರು.


ವರದಕ್ಷಿಣೆ ವಿಚಾರಕ್ಕೆ ಪತಿ, ಪತ್ನಿ ನಡುವೆ ಆಗಾಗ್ಗೆ ಜಗಳ ನಡೆದು ಶ್ರೀನಿವಾಸ್ ಹಲ್ಲೆ ಮಾಡುತ್ತಿದ್ದ. ಗಂಡನ ಮನೆಯಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ಭವ್ಯ ತನ್ನ ತಾಯಿ ಬಳಿ ಹೇಳಿಕೊಂಡಿದ್ದಳು. ಗ್ರಾಮದ ಹಿರಿಯರು, ಸಂಬಂಧಿಕರು ಸೇರಿ ಹತ್ತಕ್ಕೂ ಹೆಚ್ಚು ಬಾರಿ ಪಂಚಾಯ್ತಿ ಮಾಡಿ ರಾಜಿ ಸಂಧಾನ ಮಾಡಿಸಿದ್ದರು. ಆದರೂ ಶ್ರೀನಿವಾಸ್ ತನ್ನ ನೀಚ ಬುದ್ದಿ ಬಿಟ್ಟಿರಲಿಲ್ಲ. ಭವ್ಯಾ ತಾಯಿಗೆ ಫೋನ್ ಮಾಡಿ ದೂರು ಹೇಳುತ್ತಾಳೆ ಎಂದು ಮೊಬೈಲನ್ನು ಕೂಡ ನೀಡಿರಲಿಲ್ಲ. ಶ್ರೀನಿವಾಸ್, ಅಕ್ಕಯಮ್ಮ ಯಾವುದಾದರೂ ಸಮಾರಂಭಕ್ಕೆ ಹೋಗುವಾಗ ಭವ್ಯ ಮತ್ತು ಮಗುವನ್ನು ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿಕೊಂಡು ಹೋಗುತ್ತಿದ್ದರು. ಅಲ್ಲದೇ ಭವ್ಯಳ ಮೇಲೆ ಪತಿ ಹಾಗೂ ಅತ್ತೆ ಸದಾ ಅನುಮಾನ ಪಡುತ್ತಿದ್ದರು. ಅಲ್ಲದೇ ಶ್ರೀನಿವಾಸ್‍ಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ.


ಒಂದು ವಾರದ ಹಿಂದೆ ಶ್ರೀನಿವಾಸ್ ಹಾಗೂ ಅಕ್ಕಯಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಮೂರು ದಿನಗಳ ಕಾಲ ಭವ್ಯ ಹಾಗೂ ಮಗುವನ್ನು ಮನೆಯಲ್ಲಿ ಕೂಡಿ ಹಾಕಿದ್ದರು. ತಿನ್ನಲು ಊಟವಿಲ್ಲದೇ ಭವ್ಯ ಹಾಗೂ ಮಗು ನರಳಾಡಿದ್ದರು. ಕೊನೆಗೆ ಕಿಟಕಿಯಲ್ಲಿ ಗ್ರಾಮದ ಯುವಕನ ಬಳಿ ಬಿಸ್ಕೆಟ್ ತರಿಸಿಕೊಂಡು ಮಗುವಿಗೆ ತಿನ್ನಿಸಿದ್ದಳು. ನ.19 ರಂದು ತಾಯಿಗೆ ಕರೆ ಮಾಡಿ ಅಳಲು ತೊಡಿಕೊಂಡಿದ್ದಳು. ನಂತರ ಮಗುವಿನೊಂದಿಗೆ ದೊಡ್ಡಕುಂಚೇವುಕೊಪ್ಪಲು ಬಳಿ ಹರಿಯುತ್ತಿದ್ದ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೊನ್ನೆಯಿಂದಲೂ ಭವ್ಯ ತಾಯಿ ಹಾಗೂ ಸಂಬಂಧಿಕರು ಎಲ್ಲೆಡೆ ಹುಡುಕಾಟ ನಡೆಸಿದ್ದರು ಸಿಕ್ಕಿರಲಿಲ್ಲ. ಇಂದು ಮಗುವಿನ ಶವ ನಾಲೆಯಲ್ಲಿ ತೇಲಿ ಹೋಗುತ್ತಿದ್ದನ್ನು ಸ್ಥಳೀಯರು ಗಮನಿಸಿ ಹೊರ ತೆಗೆದಿದ್ದಾರೆ. ಇತ್ತ ತಾಯಿ ಭವ್ಯಳ ಶವ ದೊಡ್ಡಕುಂಚೇವುಕೊಪ್ಪಲು ಗ್ರಾಮದ ಕೆರೆಯಲ್ಲಿ ದೊರೆತಿದೆ. ಅಮಾಯಕರ ಸಾವಿಗೆ ಕಾರಣರಾದ ಶ್ರೀನಿವಾಸ್ ಹಾಗೂ ಅಕ್ಕಯಮ್ಮ ವಿರುದ್ಧ ಭವ್ಯಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.


ಪತಿ ಹಾಗೂ ಅತ್ತೆಯ ವರದಕ್ಷಿಣೆ ದಾಹಕ್ಕೆ ತಾಯಿ, ಮಗು ಪ್ರಾಣ ತೆತ್ತಿದ್ದರೆ, ಇತ್ತ ಪತಿ ಶ್ರೀನಿವಾಸ್ ಹಾಗೂ ಅತ್ತೆ ಅಕ್ಕಯಮ್ಮ ನಾಪತ್ತೆಯಾಗಿದ್ದಾರೆ. ಹೊಳೆನರಸೀಪುರ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ತನಿಖೆಯನ್ನು ಕೈಗೊಂಡಿದ್ದಾರೆ.


Join Whatsapp