ಬೆಂಗಳೂರು: ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗು ಸಾವಿಗೀಡಾದ ಆಘಾತಕಾರಿ ಘಟನೆ ವೈಟ್ ಫೀಲ್ಡ್ ಬಳಿಯ ಕಾಡುಗೊಡಿಯಲ್ಲಿ ನಡೆದಿದ್ದು, ಬೆಸ್ಕಾಮ್ ನ 5 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇಬ್ಬರು ಹಿರಿಯ ಅಧಿಕಾರಿಗಳಿಗೆ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಲಾಗಿದೆ.
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಬಾಣಂತಿ ಹಾಗೂ 9 ತಿಂಗಳ ಹಸುಗೂಸು ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ದಾರುಣ ಘಟನೆ ವೈಟ್ ಫೀಲ್ಡ್ ಬಳಿಯ ಕಾಡುಗೊಡಿಯಲ್ಲಿ ನಡೆದಿದೆ.
ದಾರಿಯಲ್ಲಿ ಬಿದ್ದಿದ್ದ ತಂತಿಯನ್ನು ತುಳಿದ ಸೌಂದರ್ಯ(23) ಮತ್ತು ಅವರ ಕೈಯಲ್ಲಿದ್ದ 9 ತಿಂಗಳ ಮಗು ಲೀಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಮಿಳುನಾಡು ಮೂಲದ ಇವರು ಕಾಡುಗೋಡಿಯ ಗೋಪಾಲ್ ಕಾಲೋನಿಯಲ್ಲಿ ವಾಸವಾಗಿದ್ದರು. ಇಂದು ಬೆಳಗಿನ ಜಾವ 5 ಗಂಟೆ ವೇಳೆಗೆ ದುರ್ಘಟನೆ ನಡೆದಿದೆ. ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಕಾಣಿಸದೇ ಅದನ್ನು ತುಳಿದ ಕಾರಣ ವಿದ್ಯುತ್ ಪ್ರವಹಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಮಂಜುಳಾ ಪತಿಯೆದುರೇ ಈ ಘಟನೆ ನಡೆದಿದೆ.
ಘಟನೆ ಬಳಿಕ ವಶಕ್ಕೆ ಪಡೆಯಲಾಗಿದ್ದ ಅಧಿಕಾರಿಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಪತಿ ಪತ್ನಿ ಹಾಗೂ ಮಗುವನ್ನು ರಕ್ಷಿಸಲು ಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಇಂಧನ ಸಚಿವ ಕೆಜೆ ಜಾರ್ಜ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಅಧಿಕಾರಿಗಳ ಅಮಾನತಿಗೆ ಆದೇಶಿಸಿದ್ದಾರೆ. ಆ ಬಳಿಕ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಡುಗೋಡಿ ವಿಭಾಗದ ಬೆಸ್ಕಾಮ್, ಪ್ರಾಥಮಿಕ ಹಂತದ ವಿಚಾರಣೆಯ ನಂತರ ಅಧಿಕಾರಿಗಳನ್ನು ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿದೆ. ಘಟನೆ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುವುದು ಎಂದು ಬೆಸ್ಕಾಮ್ ಹೇಳಿದೆ.