ದಾವಣಗೆರೆ : ಜಗಳೂರು ತಾಲೂಕಿನ ಮಲ್ಲಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆರಿಗೆಗೆ ಬಂದ ಗರ್ಭಿಣಿ ಮತ್ತು ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಸಂಬಂಧಿಕರು ಆರೋಪಿಸಿದ್ದಾರೆ.
ಸಾವಿತ್ರಿ (32) ಹಾಗೂ ಅವರ ನವಜಾತ ಶಿಶು ಸಾವನ್ನಪ್ಪಿದ್ದಾರೆ.
ಶನಿವಾರ ಹೆರಿಗೆಗೆ ಅಂತಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೃತ ಮಹಿಳೆ ಸಾವಿತ್ರಿ ಮಧ್ಯಾಹ್ನ 1 ಗಂಟೆಗೆ ಬಂದಿದ್ದರೆ. ಆದರೆ, ಮಹಿಳೆಗೆ ಸಾಯಂಕಾಲ 6 ಗಂಟೆಗೆ ಚಿಕಿತ್ಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ.
ಮಧ್ಯಾಹ್ನ ಆಸ್ಪತ್ರೆಗೆ ಆಗಮಿಸಿದ್ದ ಮಹಿಳೆಗೆ ನರ್ಸ್ ಹೆರಿಗೆ ಮಾಡಿಸಲು ಮುಂದಾಗಿದ್ದರು. ಈ ವೇಳೆ ಮಹಿಳೆಯ ಗರ್ಭಚೀಲ ಹರಿದು ಮಗು ಮತ್ತು ತಾಯಿಗೆ ತೊಂದರೆಯಾಗಿದೆ ಎನ್ನಲಾಗಿದೆ. ನಂತರ ಅಲ್ಲಿಂದ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ನರ್ಸ್ ಹೇಳಿದ್ದರಂತೆ.
ಜಿಲ್ಲಾಸ್ಪತ್ರೆಯಲ್ಲೂ ಕುಂಟು ನೆಪ ಹೇಳಿ ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದು, ಅಲ್ಲಿಯೂ ಚಿಕಿತ್ಸೆ ಫಲಿಸದೆ ತಾಯಿ ಮಗು ಕೊನೆಯುಸಿರೆಳೆದರು. ಇನ್ನು ಗ್ರಾಮದಲ್ಲಿ ಶವ ಸಂಸ್ಕಾರ ಮಾಡದೆ ತಾಯಿ-ಮಗು ಶವವಿಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿದರು.