ಬೆಂಗಳೂರು: ವಿಕಲಚೇತನ ಮಗಳನ್ನು ಕೊಂದ ತಾಯಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಿಯಾಂಕ(14) ತಾಯಿಯಿಂದ ಹತ್ಯೆಯಾದ ಮಗಳು. ತಾಯಿ ಸುಮಾ ಸದ್ಯ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ.
ಅನೇಕ ವರ್ಷಗಳಿಂದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಸನ್ನ ಲೇಔಟ್‌ನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಸುಮಾಳ ಪತಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದ. ಆದಾದ ಕೆಲ ದಿನಗಳಲ್ಲಿ ಮೂರು ವರ್ಷದ ಮಗುವನ್ನು ಸಹ ಕಳೆದುಕೊಂಡ ಸುಮಾ ಖಿನ್ನತೆಗೆ ಒಳಗಾಗಿದ್ದಳು.
ಸುಮಾ ಇದಕ್ಕೂ ಮುನ್ನ 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ಅದೃಷ್ಟವಾಷತ್ ಪ್ರಾಣಪಾಯದಿಂದ ಪಾರಾಗಿದ್ದಳು. ಮೃತ ಪ್ರಿಯಾಂಕಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಿನ್ನೆ ತಾನೇ ಡಿಸ್ಚಾರ್ಜ್ ಮಾಡಿಕೊಂಡು ಬರಲಾಗಿತ್ತು.
ಗಂಡ ಹಾಗೂ ಮಗುವನ್ನು ಕಳೆದುಕೊಂಡ ನೋವು ಒಂದು ಕಡೆ. ಇದ್ದೊಬ್ಬ ಮಗಳು ಸಹ ವಿಕಲಚೇತನೆಯಾಗಿದ್ದರಿಂದ ಮನನೊಂದ ಸುಮಾ ಇಂದು ಮನೆಯಲ್ಲೇ ಮಗಳನ್ನು ಕೊಂದು ಫ್ಯಾನ್’ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಸದ್ಯ ಗಂಭೀರ ಪರಿಸ್ಥಿತಿಯಲ್ಲಿರುವ ಸುಮಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿರುವ ಬ್ಯಾಡರಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.