ಮುಂಬೈ: ಪತಿಯನ್ನು ತೊರೆದು ಪ್ರಿಯಕರನೊಂದಿಗೆ ವಾಸಿಸಲು ತನ್ನ ಮೂರು ಮತ್ತು ಐದು ವರ್ಷದ ಮಕ್ಕಳನ್ನು ಕೊಂದ ಮಹಿಳೆಯನ್ನು ಬಂಧಿಸಲಾಗಿದೆ. ರಾಯಗಢ ಮೂಲದ ಶೀತಲ್ ಪೋಲ್(25) ಬಂಧಿತ ಮಹಿಳೆ.
ಮಾರ್ಚ್ 31 ರಂದು ಶೀತಲ್ ಪೋಲ್ ತನ್ನ ಮಕ್ಕಳನ್ನು ಮನೆಯಲ್ಲಿ ಉಸಿರುಗಟ್ಟಿಸಿ ಕೊಂದಿದ್ದಳು. ಪತಿ ಮನೆಗೆ ಬಂದಾಗ ಮಕ್ಕಳು ಮಲಗಿದ್ದಾರೆ ಎಂದು ಆಕೆ ಸುಳ್ಳು ಹೇಳಿದ್ದಳು.
ಆದರೆ, ಇಬ್ಬರೂ ಎಚ್ಚರಗೊಳ್ಳದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಡೆಗೆ ಮಕ್ಕಳು ಮೃತಪಟ್ಟಿದ್ದರು. ಆದರೆ ವ್ಯತಿರಿಕ್ತ ಹೇಳಿಕೆ ನೀಡಿದ್ದ ಆಕೆಯನ್ನು ವಿವರವಾಗಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿತ್ತು.
ಮೊದಲು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿತ್ತು. ಆದರೆ ತನಿಖೆಯ ಸಮಯದಲ್ಲಿ ಮಹಿಳೆ ಮತ್ತು ಆಕೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯ ನಡುವಿನ ಕರೆ ದಾಖಲೆಗಳನ್ನು ಪರಿಶೀಲಿಸಲಾಯಿತು. ಹೆಚ್ಚಿನ ವಿಚಾರಣೆಯಲ್ಲಿ ಶೀತಲ್ ಪೋಲ್ ಮಕ್ಕಳನ್ನು ತಾನೇ ಕೊಂದದ್ದೆಂದು ಒಪ್ಪಿಕೊಂಡಿದ್ದಾಳೆ. ತನ್ನ ಮಕ್ಕಳನ್ನು ಕೊಂದು ಗೆಳೆಯನೊಂದಿಗೆ ಓಡಿಹೋಗಲು ಯೋಜಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.