ಹೈದರಾಬಾದ್: ಹೈದರಾಬಾದ್ ಹೊರವಲಯದಲ್ಲಿರುವ ಮಸ್ಜಿದ್ ಇ ಖ್ವಾಜಾ ಮಹ್ಮೂದ್ ಮಸೀದಿಯನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ನೆಲಸಮಗೊಳಿಸಿದ ನಂತರ ಶಂಶಾಬಾದಿನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಗ್ರೀನ್ ಅವೆನ್ಯೂ ಕಾಲೋನಿಯಲ್ಲಿರುವ ಮಸ್ಜಿದ್-ಎ- ಖ್ವಾಜಾ ಮಹಮೂದ್ ಅನ್ನು ಮುನ್ಸಿಪಲ್ ಸಿಬ್ಬಂದಿ ಆಗಸ್ಟ್ 2ರಂದು ಮುಂಜಾನೆ ಭಾರಿ ಪೊಲೀಸ್ ಉಪಸ್ಥಿತಿಯ ನಡುವೆ ನೆಲಸಮಗೊಳಿಸಿದ್ದರು.
ಸುದ್ದಿ ಹರಡಿದ ನಂತರ ,ಬೆಳಿಗ್ಗೆ 10 ಗಂಟೆ ಸುಮಾರಿಗೆ ಶಂಶಾಬಾದ್ ಮುನ್ಸಿಪಲ್ ಕಚೇರಿ ಬಳಿ ಸ್ಥಳೀಯ ಮುಸ್ಲಿಂ ನಿವಾಸಿಗಳು, ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ ಮತ್ತು ಮಜ್ಲಿಸ್ ಬಚಾವೂ ತೆಹ್ರಿಕ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಬುಧವಾರವೂ ಮುಂದುವರೆದಿದೆ.
ಎಐಎಂಐಎಂನ ಸ್ಥಳೀಯ ಮುಖಂಡರು ಮಸೀದಿ ನೆಲಸಮವನ್ನು ಖಂಡಿಸಿದ್ದು, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ಸರ್ಕಾರವು ಮಸೀದಿ ಧ್ವಂಸಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ತಕ್ಷಣವೇ ಮರುನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಮಸೀದಿಯನ್ನು ನಿಗದಿತವಲ್ಲದ ಸ್ಥಳದಲ್ಲಿ ಕಟ್ಟಲಾಗಿದೆ ಎಂದು ಗ್ರೀನ್ ಅವೆನ್ಯೂ ಕಾಲೋನಿಯ ನಿವಾಸಿಗರು ದೂರು ನೀಡಿದ್ದರಿಂದ ಮಸೀದಿ ಕೆಡವಲಾಗಿದೆ ಎಂದು ನಗರಪಾಲಿಕೆ ತಿಳಿಸಿದೆ.
ಮುಂಜಾಗ್ರತಾ ಕ್ರಮವಾಗಿ ಶಂಶಾಬಾದ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ