►ಕೋರ್ಟ್ ಆದೇಶಕ್ಕೂ ಗೌರವ ನೀಡದ ಆದಿತ್ಯನಾಥ್!
ಲಕ್ನೋ : ಉತ್ತರಪ್ರದೇಶದ ಬಾರ್ಬಂಕಿ ಜಿಲ್ಲೆಯ ರಾಮ್ ಸಂಸೇಯೀ ಘಾಟ್ ಪಟ್ಟಣದಲ್ಲಿ ಜಿಲ್ಲಾಡಳಿತ ಮಸೀದಿಯೊಂದನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ಮಸೀದಿ 100 ವರ್ಷಗಳಷ್ಟು ಹಳೆಯದಾಗಿದ್ದು ಅಲಹಾಬಾದ್ ಹೈಕೋರ್ಟ್ ನ ಆದೇಶವನ್ನು ಧಿಕ್ಕರಿಸಿ ಜಿಲ್ಲಾಡಳಿತವು ಮಸೀದಿಯನ್ನು ಧ್ವಂಸಗೊಳಿಸಿದೆ ಎಂದು ಮಸೀದಿಯ ಆಡಳಿತ ಮಂಡಳಿ ಆರೋಪಿಸಿದೆ.
ಏಪ್ರಿಲ್ 24 ರಂದು ಹೈಕೋರ್ಟ್ ಹೊರಡಿಸಿದ ಆದೇಶದಲ್ಲಿ ಮೇ 31 ರವರೆಗೆ ಮಸೀದಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಬಾರದೆಂದು ನ್ಯಾಯಾಲಯ ತಿಳಿಸಿತ್ತು. ಮಾರ್ಚ್ 15 ರಂದು ಜಿಲ್ಲಾಡಳಿತವು ಮಸೀದಿಯ ಆಡಳಿತ ಮಂಡಳಿಗೆ ನೋಟಿಸ್ ಕಳುಹಿಸಿ ಮಸೀದಿಯನ್ನು ಕಾನೂನುಬಾಹಿರವಾಗಿ ನಿರ್ಮಿಸಲಾಗಿದೆ ಎಂದು ತಿಳಿಸಿತ್ತು. ಮಸೀದಿಯ ಆಡಳಿತ ಮಂಡಳಿಯು 1956 ರಿಂದಲೇ ಮಸೀದಿಯು ವಿದ್ಯುತ್ ಸಂಪರ್ಕವನ್ನು ಹೊಂದಿದ್ದು, ಮಸೀದಿಯು ಕಾನೂನುಬಾಹಿರವಲ್ಲ ಎಂದು ಉತ್ತರಿಸಿತ್ತು.
ಜಿಲ್ಲಾಡಳಿತವು ಅದನ್ನು ತಿರಸ್ಕರಿಸಿದಾಗ ಮಸೀದಿಯ ಆಡಳಿತ ಮಂಡಳಿಯು ನ್ಯಾಯಾಲಯವನ್ನು ಸಂಪರ್ಕಿಸಿತ್ತು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಮೇ 31 ರವರೆಗೆ ಮಸೀದಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಬಾರದೆಂದು ಜಿಲ್ಲಾಡಳಿತಕ್ಕೆ ತಿಳಿಸಿತ್ತು. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಜಿಲ್ಲಾಡಳಿತ ಬುಲ್ಡೋಜರ್‌ನಿಂದ ಮಸೀದಿಯನ್ನು ಧ್ವಂಸಗೊಳಿಸಿದೆ ಎಂದು ಆರೋಪಿಸಲಾಗಿದೆ.