ಲಕ್ನೋ: ಡ್ರಿಪ್ ನಲ್ಲಿ ಪ್ಲಾಸ್ಮಾ ಬದಲು ಮೂಸಂಬಿ ಜ್ಯೂಸ್ ಅನ್ನು ಡೆಂಗ್ಯೂ ರೋಗಿಯೊಬ್ಬರಿಗೆ ನೀಡಿದ ಕಾರಣ ವ್ಯಕ್ತಿ ಮೃತ ಪಟ್ಟಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಖಾಸಗಿ ಆಸ್ಪತ್ರೆ ಯಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಜಿಲ್ಲಾಡಳಿತವು ಪ್ರಾಥಮಿಕ ತನಿಖೆಯ ನಂತರ ಸೀಲ್ಡೌನ್ ಮಾಡಲು ಆದೇಶಿಸಿದೆ.
32 ವರ್ಷದ ರೋಗಿಗೆ ಪ್ರಯಾಗ್ರಾಜ್ ನಲ್ಲಿರುವ ಗ್ಲೋಬಲ್ ಹಾಸ್ಪಿಟಲ್ ಅಂಡ್ ಟ್ರಾಮಾ ಸೆಂಟರ್ ನಲ್ಲಿ ‘ಪ್ಲಾಸ್ಮಾ’ ಎಂದು ಮೂಸಂಬಿ ಜ್ಯೂಸ್ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ರೋಗಿಯನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ರೋಗಿಯನ್ನು ಪರೀಕ್ಷಿಸಿದ ವೈದ್ಯರು’ಪ್ಲೇಟ್ಲೆಟ್’ ಬದಲು ಮೂಸಂಬಿ ಜ್ಯೂಸ್ ನೀಡಲಾಗಿದೆ ಎಂದು ತಿಳಿಸಿದ್ಧಾರೆ.
ಇದರಿಂದ ರೋಗಿಯ ಸ್ಥಿತಿ ಹದಗೆಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ರಕ್ತದ ಪ್ಯಾಕ್ ಒಳಗೆ ಮೂಸಂಬಿ ರಸವನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈದ್ಯರ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ವೈದ್ಯಕೀಯ ಅಧಿಕಾರಿ ಘಟನೆ ನಡೆದ ಗ್ಲೋಬಲ್ ಹಾಸ್ಪಿಟಲ್ ಮತ್ತು ಟ್ರಾಮಾ ಸೆಂಟರ್ ಅನ್ನು ತಕ್ಷಣವೇ ಮುಚ್ಚಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಆಸ್ಪತ್ರೆಯ ಎಲ್ಲಾ ರೋಗಿಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾಡಳಿತವು ಮೂವರು ಸದಸ್ಯರ ಸಮಿತಿಗೆ ಆದೇಶಿಸಿದೆ. ಈ ಘಟನೆಯ ಪ್ರಾಥಮಿಕ ತನಿಖೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯವನ್ನು ಬಹಿರಂಗಪಡಿಸಲಾಗಿದೆ.